ಪಿರಿಯಾಪಟ್ಟಣ: ತಾಲೂಕಿನ ಮಾಲಂಗಿ ಗ್ರಾಪಂ ವ್ಯಾಪ್ತಿಯ ಅಬ್ಬಳತಿ ಗ್ರಾಮದ ಆಶ್ರಮ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಾರ್ಡ್ ಸಭೆಯಲ್ಲಿ ಪಂಚಾಯಿತಿ ಪಿಡಿಒ ಡಾ.ಆಶಾ ರವರನ್ನು ಅಮಾನತು ಮಾಡುವವರಿಗೆ ಸಭೆ ನಡೆಸಬಾರದು ಎಂದು ಒತ್ತಾಯಿಸಿ ಸಭಾಧ್ಯಕ್ಷತೆ ಪೂವಿ ಹಾಗೂ ಗ್ರಾಪಂ ಸದಸ್ಯರು ನೂಡಲ್ ಅಧಿಕಾರಿ ವಿಶ್ವನಾಥ್ ರವರಿಗೆ ಮನವಿ ಮಾಡಿದರು.
ತಾಲೂಕಿನ ಅಬ್ಬಳತಿ ಆಶ್ರಮ ಶಾಲೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಪಿಡಿಒ ಡಾ.ಆಶಾ ಮತ್ತು ಗ್ರಾಪಂ ಅಧ್ಯಕ್ಷರು ಸಾಮಾನ್ಯ ಸಭೆಯಲ್ಲಿ ನಡೆದಿರುವ ಸಭಾ ನಿರ್ಣಯವನ್ನು ತಿರುಚಿ ಸದಸ್ಯರ ಗಮನಕ್ಕೆ ಬಾರದಂತೆ ಖಾಲಿ ಹಾಳೆಗೆ ಸಹಿ ಪಡೆದು ಅದರಲ್ಲಿ ಅಕ್ರಮ ಕಾಮಗಾರಿಗಳಿಗೆ ಸದಸ್ಯರು ಅನುಮೋದನೆ ನೀಡಿದ್ದಾರೆ ಎಂದು ಸುಳ್ಳು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಸುಳ್ಳು ಬಿಲ್ ಮಾಡಿಕೊಂಡಿದ್ದಾರೆ .
ಈ ವಿಷಯವಾಗಿ ಪಂಚಾಯಿತಿ ಸದಸ್ಯರಾದ ನಾವುಗಳು ಇದನ್ನು ಪರಿಶೀಲಿಸಿ ಮಾಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುವಂತೆ ಆಗ್ರಹಿಸಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದೇವೆ ಇದರ ನಡುವೆ ಪಿಡಿಒ ಡಾ.ಆಶಾ ರವರು ನಿಯಮಬಾಹಿರವಾಗಿ ವಾರ್ಡಿನ ಮತ್ತು ಸಾಮಾನ್ಯ ಸಭೆ ನಡೆಸಲು ಮುಂದಾಗಿದ್ದರು ಆಗ ಇವರ ಮೇಲಿನ ಆರೋಪ ಇತ್ಯರ್ಥವಾಗುವವರೆಗೂ ಇವರ ನೇತೃತ್ವದಲ್ಲಿ ಸಭೆ ನಡೆಸಬಾರದು ಎಂದು ದೂರು ನೀಡಿದ್ದರೂ ಆಶಾ ರವರು ಮಂಗಳವಾರ ವಾರ್ಡಿನ ಸಭೆ ನಡೆಸಲು ನೋಟಿಸ್ ಜಾರಿ ಮಾಡಿ ತುರ್ತು ರಜೆ ಮೇಲೆ ತಿಂಗಳುಗಟ್ಟಲೆ ರಜೆ ಹಾಕಿ ಈಗ ನೂಡಲ್ ಅಧಿಕಾರಿ ನೇತೃತ್ವದಲ್ಲಿ ಸಭೆ ನಡೆಸುತ್ತಿರುವ ಕ್ರಮ ಸರಿಯಲ್ಲ ಎಂದು ವಾರ್ಡ್ ಸಭೆ ಅಧ್ಯಕ್ಷೆ ಪೂವಿ, ಸದಸ್ಯರಾದ ಹೆಚ್.ಸಿ.ದೇವೇಂದ್ರ, ಎಂ.ಎಸ್.ಹರೀಶ್ ಹಾಗೂ ಗ್ರಾಮಸ್ಥರು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಮುಂದಿನ ಸಭೆಯ ದಿನಾಂಕ ನಿಗದಿಪಡಿಸುವವರೆಗೆ ಸಭೆಯನ್ನು ಮುಂದೂಡಲಾಗಿದೆ ಎಂದು ನೋಡಲ್ ಅಧಿಕಾರಿ ವಿಶ್ವನಾಥ್ ಹೇಳಿದರು.