ಚಾಮರಾಜನಗರ: ದಿನಪತ್ರಿಕೆ ವಿತರಿಸುವವರಿಗೆ ಕಾರ್ಮಿಕ ಇಲಾಖೆಯು ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ ಜಾರಿಗೆ ತಂದಿದ್ದು ಇದರ ಪ್ರಯೋಜನ ಪಡೆಯಲು ಮನವಿ ಮಾಡಿದೆ.
ದಿನಪತ್ರಿಕೆ ವಿತರಿಸುವವರು ಅಸಂಘಟಿತ ವಲಯಕ್ಕೆ ಸೇರಿದ್ದು, ಇವರಿಗೆ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ ರೂಪಿಸಲಾಗಿದೆ. ದಿನಪತ್ರಿಕೆ ವಿತರಿಸುವ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತಿದೆ. ಯೋಜನೆಯ ಸೌಲಭ್ಯ ಪಡೆಯುವ ದಿನಪತ್ರಿಕೆ ವಿತರಿಸುವವರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. 16 ರಿಂದ 59ರ ವಯೋಮಾನದವರಾಗಿರಬೇಕು. ಕೇಂದ್ರ ಸರ್ಕಾರದ ಇ-ಶ್ರಮ್ ಪೋರ್ಟಲ್‍ನಲ್ಲಿ (ನ್ಯೂಸ್ ಪೇಪರ್ ಬಾಯ್) ಎಂಬ ವರ್ಗದಡಿ ನೋಂದಣಿಯಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯ ಹೊಂದಿರಬಾರದು.
ಅಪಘಾತ ಪರಿಹಾರ ಯೋಜನೆಯಡಿ ಮರಣ ಪ್ರಕರಣಕ್ಕೆ 2 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಅಪಘಾತದಿಂದ ಉಂಟಾಗುವ ಸಂಪೂರ್ಣ ಶಾಶ್ವತ, ಭಾಗಶಃ ದುರ್ಬಲತೆ ಪರಿಹಾರವಾಗಿ (ಶೇಕಡವಾರು ದುರ್ಬಲತೆ ಆಧಾರದ ಮೇಲೆ) 2 ಲಕ್ಷ ರೂ. ವರೆಗೆ ಪರಹಾರ ವಿತರಿಸಲಾಗುತ್ತದೆ. 1 ಲಕ್ಷ ರೂ. ವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿ ಮಾಡಲಾಗುತ್ತದೆ. ಪತ್ರಿಕಾ ವಿತರಕರು ಇಂದೇ ಇ-ಶ್ರಮ್ ಪೋರ್ಟಲ್‍ನಲ್ಲಿ ಸ್ವಯಂ ಆಗಿ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಗಳು (ಸಹಾಯವಾಣಿ 155214) ಅಥವಾ ಜಿಲ್ಲಾ ಕಾರ್ಮಿಕ ಅಧಿಕಾರಿ, ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ವೃತ್ತದ ಕಾರ್ಮಿಕ ಇಲಾಖೆಯ ಕಚೇರಿಯ ಹಿರಿಯ ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಸವಿತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.