ಬೆಂಗಳೂರು: ಶಾರ್ಟ್ ಸರ್ಕಿಟ್‌ನಿಂದ ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಕೆಲ ಸಿಬ್ಬಂದಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗುರುವಾರ ಮಧ್ಯಾಹ್ನ 1.20ಕ್ಕೆ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡದ ಕಾರ್ಡಿಯಾಕ್ ಐಸಿಯು ವಾರ್ಡ್ ನಲ್ಲಿ ಹವಾನಿಯಂತ್ರಿತ ಯಂತ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ನರ್ಸ್‌ಗಳು ವಾರ್ಡ್‌ನಲ್ಲಿದ್ದ 8 ಮಂದಿ ರೋಗಿಗಳನ್ನು ಸ್ಥಳಾಂತರಿಸಿದ್ದಾರೆ. ಈ ವೇಳೆ ನರ್ಸ್‌ಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ವಿಚಾರ ತಿಳಿದು ಸ್ಥಳಕ್ಕೆ ಒಂದು ಅಗ್ನಿಶಾಮಕ ವಾಹನ ಜತೆ ಆಗಮಸಿದ ಅಧಿಕಾರಿಗಳು ಕೆಲವೇ ಹೊತ್ತಿನಲ್ಲಿ ಬೆಂಕಿ ನಂದಿಸಿದ್ದಾರೆ. ಜತೆಗೆ ಆಸ್ಪತ್ರೆಯ ಸಿಬ್ಬಂದಿ ಕೂಡ ಅಗ್ನಿ ನಂದಕಗಳ ಮೂಲಕ ಬೆಂಕಿ ನಂದಿಸಲು ಯತ್ನಿಸಿದ್ದಾರೆ ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.