ಪಿರಿಯಾಪಟ್ಟಣ: ತಂಬಾಕು ಹದ ಮಾಡುವ ಎರಡು ಬ್ಯಾರನ್ ಗಳು ಆಕಸ್ಮಿಕ ಬೆಂಕಿ ಅವಘಡದಿಂದ ಹೊತ್ತಿ ಉರಿದು ಅಪಾರ ಪ್ರಮಾಣದ ತಂಬಾಕು ಬೆಳೆ ನಾಶವಾಗಿರುವ ಘಟನೆ ತಾಲೂಕಿನ ಗಂಗೂರು ಗ್ರಾಮದಲ್ಲಿ ಜರುಗಿದೆ. ಗ್ರಾಮದ ಸಣ್ಣಮಾದೇಗೌಡ ಎಂಬ ರೈತ ಅದೇ ಗ್ರಾಮದ ಎಸ್ರಿಫ್ ಬೇಗಮ್ ಅವರ ಹೆಸರಿಗೆ ಸೇರಿದ ತಂಬಾಕು ಹದ ಮಾಡುವ ಬ್ಯಾರನ್ ಅನ್ನು ಕೆಲ ವರ್ಷಗಳಿಂದ ಬಾಡಿಗೆಗೆ ಪಡೆದು ತಂಬಾಕು ಹದ ಮಾಡುತ್ತಿದ್ದರು, ಎರಡು ಬ್ಯಾರನ್ ಗಳು ಅಕ್ಕಪಕ್ಕದಲ್ಲಿದ್ದು ಒಂದು ಬ್ಯಾರನ್ ನಲ್ಲಿ ತಂಬಾಕು ಹದ ಪ್ರಕ್ರಿಯೆ ನಡೆಯುತ್ತಿದ್ದು ಮತ್ತೊಂದು ಬ್ಯಾರನ್ ನಲ್ಲಿ ಹಿಂದಿನ ದಿನವಷ್ಟೇ ತಂಬಾಕು ಹದ ಮಾಡುವ ಪ್ರಕ್ರಿಯೆ ಮುಗಿದಿತ್ತು. ಶುಕ್ರವಾರ ಸಂಜೆ ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಅಪಾರ ಪ್ರಮಾಣದ ತಂಬಾಕು ಹಾಗೂ ಬ್ಯಾರನ್ ಕಟ್ಟಡ ನಾಶವಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಪ್ರಮಾಣದ ಅವಘಡ ತಪ್ಪಿಸಿದ್ದಾರೆ.
ರೈತ ಸಣ್ಣಮಾದೇಗೌಡ ಅವರು ಮಾತನಾಡಿ ಸಾಲ ಮಾಡಿ ಕುಟುಂಬದವರೆಲ್ಲ ಒಟ್ಟಾಗಿ ಸೇರಿ ತಂಬಾಕು ಬೆಳೆ ಬೆಳೆದು ಹದ ಮಾಡಿ ಮಾರುಕಟ್ಟೆಗೆ ಮಾರಾಟ ಮಾಡುವ ಸಂದರ್ಭ ಅಗ್ನಿ ಅವಘಡದಿಂದ ಅಂದಾಜು 4 ರಿಂದ 5 ಲಕ್ಷ ಮೌಲ್ಯದ ಬೆಳೆ ಹಾಳಾಗಿರುವುದರಿಂದ ದಿಕ್ಕು ತೋಚದಂತಾಗಿದ್ದು ತಂಬಾಕು ಮಂಡಳಿ ಹಾಗೂ ಸಂಬಂಧಿಸಿದ ಇಲಾಖೆಯವರು ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.
