ನವದೆಹಲಿ: ಹಾವೇರಿಯ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದತಿ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಪ್ರಕರಣವನ್ನು ರಾಜಕೀಯಗೊಳಿಸಬಾರದು ಎಂದು ತಿಳಿಸಿರುವ ಸಿಜೆಐ ಬಿಆರ್ ಗವಾಯಿ ಇಂತಹ ಸಮರ ನ್ಯಾಯಾಲಯದ ಹೊರಗೆ ನಡೆಯಲಿ ಎಂದು ಆಕ್ಷೇಪ ಹೊರ ಹಾಕಿದರು, ಬಳಿಕ ಅರ್ಜಿ ವಜಾ ಮಾಡಿದರು.
ವಕ್ಫ್ ಆಸ್ತಿ ಅಂತ ಪಹಣಿಯಲ್ಲಿ ನಮೂದಾದ ಹಿನ್ನೆಲೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದಾರೆಂಬ ಆರೋಪದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಪ್ರಕರಣ ರದ್ದು ಕೋರಿ ಸಂಸದ ತೇಜಸ್ವಿ ಸೂರ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಬಳಿಕ ಹೈಕೋರ್ಟ್ ಪ್ರಕರಣವನ್ನು ರದ್ದು ಮಾಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ ಹಾವೇರಿಯ ಸಿಇಎನ್ ಪೊಲೀಸ್ ತನಿಖಾಧಿಕಾರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.