ಹಾಸನ : ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪ್ರಿಯತಮೆ ಒಬ್ಬಳು ತನ್ನ ಪ್ರಿಯಕರನಿಗೆ ಚಾಕು ಇರಿದಿದ್ದ ಘಟನೆ ಹಾಸನದಲ್ಲಿ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಯುವತಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಹಾಸನದ 4ನೇ JMFC ಕೋರ್ಟ್ ಆದೇಶ ಹೊರಡಿಸಿದೆ.
ಡಿ.31 ಮಧ್ಯರಾತ್ರಿ ಪ್ರಿಯತಮೆಯಿಂದ ಪ್ರಿಯಕರ ಮನು ಕುಮಾರ್ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವತಿ ಭವಾನಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಸಿದೆ. ನಿನ್ನೆ ಭವಾನಿಯನ್ನು ಹಾಸನದ ಬಡಾವಣೆಯ ಠಾಣೆ ಪೋಲಿಸರು ಬಂಧಿಸಿದಾರೆ.
ನಿನ್ನೆ ರಾತ್ರಿ ಜಡ್ಜ್ ಮುಂದೆ ಯುವತಿ ಭವಾನಿಯನ್ನು ಪೊಲೀಸರು ಹಾಜರುಪಡಿಸಿದ್ದರು. ಹಾಸನದ 4ನೇ ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಯುವತಿಯನ್ನು ಹಾಜರುಪಡಿಸಲಾಗಿತ್ತು.ಈ ವೇಳೆ ಭವಾನಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಜಡ್ಜ್ ಆದೇಶಿಸಿದ್ದಾರೆ. ಸದ್ಯ ಹಾಸನದ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹವನ್ನು ಆರೋಪಿ ಭವಾನಿ ಸೇರಿದ್ದಾಳೆ. ಹಾಸನ ನಗರದ ರಸ್ತೆಯ ಅಶೋಕ ಹೋಟೆಲ್‌ನಲ್ಲಿ ಡಿಸೆಂಬರ್ 31 ರಂದು ತಡರಾತ್ರಿ ಭವಾನಿ ಎಂಬವಳು ಮನುಕುಮಾರ್ (25) ಎಂಬಾತನಿಗೆ ಚಾಕು ಇರಿದಿದ್ದು, ಸದ್ಯ ಪ್ರಿಯಕರ ಹಾಸನದ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಹಾಸನ ತಾಲೂಕಿನ ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ ಹಾಗೂ ಭವಾನಿ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೆಲದಿನಗಳಿಂದ ಇಬ್ಬರೂ ಮಾತು, ಭೇಟಿ ಏನೂ ಇಲ್ಲದೆ ದೂರವಾಗಿದ್ದರು ಎನ್ನಲಾಗಿದೆ. ಆದರೆ ನಿನ್ನೆ ರಾತ್ರಿ ಮನುಕುಮಾರ್ ನ್ಯೂ ಇಯರ್ ಸೆಲೆಬ್ರೇಷನ್‌ಗಾಗಿ ನಗರದ ಅಶೋಕ ಹೋಟೆಲ್‌ಗೆ ಸ್ನೇಹಿತರ ಜೊತೆ ಬಂದಿದ್ದರಂತೆ. ಈ ವೇಳೆ ಪದೇ ಪದೇ ಮನುಕುಮಾರ್‌ಗೆ ಲವ್ವರ್ ಭವಾನಿ ಕಾಲ್ ಮಾಡುತ್ತಲೇ ಇದ್ದರಂತೆ.
ಕಾಲ್ ರಿಸೀವ್ ಮಾಡದ ಹಿನ್ನೆಲೆ ಭವಾನಿ ತಡರಾತ್ರಿ 12.30 ಕ್ಕೆ ಹೋಟೆಲ್ ಬಳಿ ಬಂದಿದ್ದು, ಅಲ್ಲೇ ಬಿದ್ದಿದ್ದ ಪಾಸ್ ಹಾಕಿಕೊಂಡು ಗೇಟ್ ಒಳಗೆ ಹೋಗಿದ್ದಾರೆ ಎನ್ನಲಾಗಿದೆ. ಗೇಟ್ ಓಪನ್ ಆಗುತ್ತಿದ್ದಂತೆ ಮನುಕುಮಾರ್ ಗೇಟ್ ಬಳಿ ಬಂದಿದ್ದು, ಈ ವೇಳೆ ಭವಾನಿ ಹಾಗೂ ಮನುಕುಮಾರ್ ನಡುವೆ ಜಟಾಪಟಿ ಶುರುವಾಗಿದೆ ಎನ್ನಲಾಗಿದೆ. ಮನುಕುಮಾರ್ ಸ್ನೇಹಿತರು ಈ ಜಗಳವನ್ನು ಬಿಡಿಸುತ್ತಿದ್ದರೂ, ಭವಾನಿ ಈ ವೇಳೆ ಏಕಾಏಕಿ ಚಾಕುವಿನಿಂದ ಮನುಕುಮಾರ್‌ಗೆ ಇರಿದಿದ್ದಾಳೆ.