Wednesday, February 4, 2026
Google search engine

Homeಸ್ಥಳೀಯ57ರಲ್ಲೂ ಸಾಧನೆ: ಶೂಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಪರಿಮಳಾ ಜಗ್ಗೇಶ್

57ರಲ್ಲೂ ಸಾಧನೆ: ಶೂಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಪರಿಮಳಾ ಜಗ್ಗೇಶ್

ನಟ ಜಗ್ಗೇಶ್ ಅವರ ಪತ್ನಿ ಪರಿಮಳಾ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರಿಗೆ 57 ವರ್ಷ ವಯಸ್ಸು. ‘ವಯಸ್ಸು ಕೇವಲ ಮನುಷ್ಯನ ಮನಸ್ಸಿನ ಮಿತಿಯಷ್ಟೇ ಹೊರತು ಸಾಧನೆಯ ಹಾದಿಗಲ್ಲ’ ಎಂಬುದನ್ನು ಅವರೀಗ ಸಾಬೀತುಪಡಿಸಿದ್ದಾರೆ ಆಹಾರ ತಜ್ಞೆಯೂ ಆಗಿರುವ ಪರಿಮಳಾ ಜಗ್ಗೇಶ್ ಅವರು ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇತ್ತೀಚೆಗೆ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ ನಡೆಯಿತು. ಅದರಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.

ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ (KSRA) ವತಿಯಿಂದ ಬೆಂಗಳೂರಿನ ‘ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ’ (SAI) ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ‘3ನೇ ನಾಗರಾಜ ರಾವ್ ಜಗದಾಳೆ ಶೂಟಿಂಗ್ ಸ್ಪರ್ಧೆ ಮತ್ತು ಚಾಂಪಿಯನ್‌ಶಿಪ್-2026’ರಲ್ಲಿ ಪರಿಮಳಾ ಜಗ್ಗೇಶ್ ಅವರು ಪಾಲ್ಗೊಂಡಿದ್ದರು. 10 ಮೀಟರ್ ಏರ್ ಪಿಸ್ತೂಲ್ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಅವರು ಸ್ಪರ್ಧಿಸಿದರು. ಮಾಸ್ಟರ್ ವಿಮೆನ್ ಇಂಡಿವಿಜುವಲ್ ವಿಭಾಗದಲ್ಲಿ 342-4x ಸ್ಕೋರ್ ಮಾಡುವ ಮೂಲಕ ಬೆಳ್ಳಿ ಪದಕ ಗೆದ್ದರು.

1994ರಿಂದಲೂ ಮಧುಮೇಹದಿಂದ ಪರಿಮಳಾ ಅವರು ಬಳಲುತ್ತಿದ್ದಾರೆ. ಅವರಿಗೆ ಕ್ರೀಡಾ ಕ್ಷೇತ್ರಕ್ಕೆ ಕಾಲಿಡುವುದು ಸುಲಭದ ಮಾತಾಗಿರಲಿಲ್ಲ. ಶೂಟಿಂಗ್ ಎನ್ನುವುದು ಏಕಾಗ್ರತೆ ಹಾಗೂ ದೈಹಿಕ ಸ್ಥಿರತೆ ಬೇಡುವ ಕ್ರೀಡೆ. ದೇಹದಲ್ಲಿ ಸಕ್ಕರೆ ಪ್ರಮಾಣ ಏರುಪೇರಾದಾಗ ಕೈಗಳು ನಡುಗುವ ಸಾಧ್ಯತೆ ಇರುತ್ತದೆ. ಇಂತಹ ದೈಹಿಕ ಸವಾಲನ್ನು ಗೆಲ್ಲಲು ಅವರು ಕಟ್ಟುನಿಟ್ಟಾದ ಆಹಾರ ಪದ್ಧತಿ ಹಾಗೂ ‘ರಿಕವರಿ ಪ್ಲಾನ್’ ರೂಪಿಸಿಕೊಂಡು ಅಭ್ಯಾಸ ಮಾಡಿದ್ದರು.

ಪರಿಮಳಾ ಜಗ್ಗೇಶ್ ಅವರು ಈ ಸ್ಪರ್ಧೆಯಲ್ಲಿ ಗೆಲ್ಲಲು ಶಿಸ್ತಿನಿಂದ ತರಬೇತಿ ಪಡೆದುಕೊಂಡಿದ್ದರು. ಗೋಲ್ಡನ್ ಏಸ್ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿಯ ಕೋಚ್ ಸಂತೋಷ್ ಬಿ.ಎನ್. ಅವರಿಂದ ಕೇವಲ ಕೆಲವೇ ತಿಂಗಳುಗಳ ಹಿಂದೆ ತರಬೇತಿ ಆರಂಭಿಸಿದ್ದರು. ಒಬ್ಬ ಉದ್ಯಮಿಯಾಗಿ ಸಂಸ್ಥೆಯ ಜವಾಬ್ದಾರಿ ಮತ್ತು ಕುಟುಂಬದ ನಿರ್ವಹಣೆಯ ನಡುವೆಯೂ, ಪ್ರತಿದಿನ ಬೆಳಗ್ಗೆ 4 ಗಂಟೆಗೆ ಎದ್ದು ಶೂಟಿಂಗ್ ರೇಂಜ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಅವರ ಈ ನಿರಂತರ ಪರಿಶ್ರಮದಿಂದ ಬೆಳ್ಳಿ ಪದಕ ಗೆಲ್ಲುವಂತಾಯಿತು.

RELATED ARTICLES
- Advertisment -
Google search engine

Most Popular