Friday, April 11, 2025
Google search engine

Homeರಾಜ್ಯ“ಟಾಕ್ಸಿಕ್‌’ ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಅಧಿಕಾರಿ ವಿರುದ್ಧ ಕ್ರಮ

“ಟಾಕ್ಸಿಕ್‌’ ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಅಧಿಕಾರಿ ವಿರುದ್ಧ ಕ್ರಮ

ಬೆಂಗಳೂರು: ಎಚ್‌ಎಂಟಿ ಅನುಭೋಗದಲ್ಲಿರುವ ಅರಣ್ಯ ಭೂಮಿಯಲ್ಲಿ ಯಶ್‌ ಅಭಿನಯದ “ಟಾಕ್ಸಿಕ್‌’ ಎಂಬ ಸಿನಿಮಾ ಚಿತ್ರೀಕರಣ ನಡೆದಿದ್ದು, ಇದಕ್ಕಾಗಿ ನೂರಾರು ಗಿಡ-ಮರಗಳನ್ನು ಕಡಿಯಲಾಗಿದೆ. ಇದಕ್ಕೆ ಅನುಮತಿ ನೀಡಿದ ಅಧಿಕಾರಿ ಅಥವಾ ಅನುಮತಿ ಪಡೆಯದೆ ಮರ ಕಡಿದ ಚಿತ್ರತಂಡದ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚಿಸಿದ್ದಾರೆ.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಎಚ್‌ಎಂಟಿಗೆ ಭೇಟಿ ನೀಡಿ, ಪುನಶ್ಚೇತನದ ಬಗ್ಗೆ ಘೋಷಿಸಿದಾಗಿನಿಂದಲೂ ಅದು ಅರಣ್ಯ ಭೂಮಿ ಎಂದು ಪ್ರತಿಪಾದಿಸುತ್ತಲೇ ಬಂದಿರುವ ಸಚಿವ ಖಂಡ್ರೆ, ಮಂಗಳವಾರ ಪೀಣ್ಯ ಪ್ಲಾಂಟೇಶನ್‌ 1 ಮತ್ತು 2ರಲ್ಲಿನ ಎಚ್‌ಎಂಟಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಿನದ ಆಧಾರದ ಮೇಲೆ ಬಾಡಿಗೆ:

ಬಳಿಕ ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಚ್‌ಎಂಟಿ ಅನುಭೋಗದಲ್ಲಿರುವ ಜಾಗವು ಅರಣ್ಯ ಇಲಾಖೆಗೇ ಸೇರಿದ್ದು. ತನ್ನ ಸ್ವಾಧೀನದಲ್ಲಿರುವ ಈ ಭೂಮಿಯನ್ನು ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಅರಣ್ಯೇತರ ಚಟುವಟಿಕೆಗಳೂ ನಡೆಯುತ್ತಿವೆ. ಈ ಪ್ರದೇಶದಲ್ಲಿದ್ದ ಮರ-ಗಿಡಗಳನ್ನು ಕಡಿದಿರುವುದು ಉಪಗ್ರಹ ಆಧಾರಿತ ಚಿತ್ರದಿಂದ ಗೋಚರಿಸುತ್ತದೆ. ಸಾಲದ್ದಕ್ಕೆ ತನ್ನ ಸುಪರ್ದಿಯಲ್ಲಿದ್ದ ಅರಣ್ಯ ಭೂಮಿ ಹಾಗೂ ಖಾಲಿ ಜಾಗಗಳನ್ನು ಸಿನಿಮಾ ಚಿತ್ರೀಕರಣಕ್ಕೆ ದಿನದ ಆಧಾರದ ಮೇಲೆ ಬಾಡಿಗೆಗೆ ನೀಡುತ್ತಿರುವುದೂ ಗಮನಕ್ಕೆ ಬಂದಿದೆ.

ಅಪರಾಧ ಪ್ರಕರಣ ದಾಖಲಿಸಿ:

ಕೆನರಾ ಬ್ಯಾಂಕ್‌ಗೆ ಮಾರಾಟ ಮಾಡಿದೆ ಎನ್ನಲಾದ ಅರಣ್ಯ ಭೂಮಿಯಲ್ಲಿ ಹಲವು ತಿಂಗಳಿಂದ “ಟಾಕ್ಸಿಕ್‌’ ಎಂಬ ಹೆಸರಿನ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದಕ್ಕಾಗಿ ನೂರಾರು ಗಿಡ-ಮರಗಳನ್ನು ಕಡಿದು ದೊಡ್ಡ ಸೆಟ್‌ ಹಾಕಲಾಗಿದೆ. ಇದಕ್ಕೆ ಅನುಮತಿ ನೀಡಿದ್ದರೆ, ಆ ಅಧಿಕಾರಿ ವಿರುದ್ಧ ಕ್ರಮ ಆಗಬೇಕು. ಅನುಮತಿ ಪಡೆಯದೆ ಗಿಡ-ಮರಗಳನ್ನು ಕಡಿದಿದ್ದರೆ, ಚಿತ್ರತಂಡದ ವಿರುದ್ಧ ಸೇರಿದಂತೆ ಕಾರಣರಾದ ಎಲ್ಲರ ವಿರುದ್ಧವೂ ಅರಣ್ಯ ಅಪರಾಧ ಪ್ರಕರಣ ದಾಖಲಿಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular