ಯಳಂದೂರು:: ಯಳಂದೂರು ಪಟ್ಟಣಕ್ಕೆ ಯರಿಯೂರು, ಗುಂಬಳ್ಳಿ ಹಾಗೂ ಅಂಬಳೆ ಪಂಚಾಯಿತಿಯ ಕೆಲವು ಸರ್ವೇ ನಂಬರ್‌ಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿಕೊಂಡು ಇಲ್ಲಿಗೆ ಹೊರ ವರ್ತುಲ ರಸ್ತೆ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಭರವಸೆ ನೀಡಿದರು.
ಅವರು ಪಟ್ಟಣದ ಬಳೇಪೇಟೆಯಲ್ಲಿ ಅಮೃತ್-೨.೦ ಯೋಜನೆಯಡಿಯಲ್ಲಿ ಪಟ್ಟಣ ಪಂಚಾಯಿತಿ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಸುಧಾರಿತ ನೀರು ಸರಬರಾಜು ಯೋಜನೆಯಡಿಯಲ್ಲಿನ ೬.೨೦ ಕೋಟಿ ರೂ. ವೆಚ್ಚದ ಒವರ್‌ಹೆಡ್ ಟ್ಯಾಂಕ್‌ನ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪಟ್ಟಣ ಚಿಕ್ಕದಾಗಿದೆ. ಇಲ್ಲಿಗೆ ಮೂಲ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಪಟ್ಟಣಕ್ಕೆ ಸುಧಾರಿತ ಕುಡಿಯುವ ನೀರು ಪೂರೈಕೆ ಮಾಡಲು ೬.೨೦ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಒವರ್ ಹೆಡ್ ಟ್ಯಾಂಕ್ ಇದನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೆಲ ಸರ್ವೇ ಸಂಖ್ಯೆಗಳನ್ನು ಪಟ್ಟಣಕ್ಕೆ ಸೇರಿಸಿಕೊಂಡರೆ ಇದು ವಿಸ್ತಾರಗೊಳ್ಳುತ್ತದೆ. ಪಟ್ಟಣದ ಬಳೇಪೇಟೆಯಲ್ಲಿ ಸಂಚಾರ ಒತ್ತಡವನ್ನು ತಪ್ಪಿಸುವ ನಿಟ್ಟಿನಲ್ಲಿ ಕಾರಾಪುರ ವಿರಕ್ತಮಠದಿಂದ ಉಪ್ಪಿನಮೋಳೆ ಗ್ರಾಮದ ವರೆಗೆ ಹೊರ ವರ್ತುಲ ರಸ್ತೆ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು. ಈಗಾಗಲೇ ಪಟ್ಟಣದಲ್ಲಿ ೩೫ ಕೋಟಿ ರೂ. ವೆಚ್ಚದ ಆಸ್ಪತ್ರೆ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ೨೦ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಬಿಳಿಗಿರಿರಂಗನಬೆಟ್ಟದ ಪುರಾಣಿ ಪೋಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಂಡರ್‌ಗ್ರೌಂಡ್ ಕೇಬಲ್ ಅಳವಡಿಕೆಯೂ ಸೇರಿದಂತೆ ೧೦ ಕೋಟಿ ರೂ.ವೆಚ್ಚದ ಕಾಮಗಾರಿ ನಡೆಯುತ್ತಿದೆ. ಇದರೊಂದಿಗೆ ಹೊಸದಾಗಿ ಇಲ್ಲಿಗೆ ಪವರ್ ಕಂಡಕ್ಟರ್ ಲೈನ್ ಮಾಡಲು ೨ ಕೋಟಿ ರೂ. ಬಿಡುಗಡೆಯಾಗಿದ್ದು ಈ ಕಾಮಗಾರಿಯೂ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದರು.
ಗ್ಯಾರಂಟಿಯೋಜನೆಗಳ ಪ್ರತಿಷ್ಟಾನದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಸದಸ್ಯ ಜೆ. ಯೋಗೇಶ್ ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ ಮಾತನಾಡಿದರು. ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು ಉಪಾಧ್ಯಕ್ಷೆ ಶಾಂತಮ್ಮನಿಂಗರಾಜು ಸದಸ್ಯರಾದ ಮಹದೇವನಾಯಕ, ಮಂಜು, ಬಿ. ರವಿ, ಸುಶೀಲಾಪ್ರಕಾಶ್ ನಾಮನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್ ಬೇಗ್, ಶ್ರೀಕಂಠಸ್ವಾಮಿ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಎಇಇ ಚಿನ್ನಸ್ವಾಮಿ, ಗುತ್ತಿಗೆದಾರ ರವಿಕುಮಾರ್, ಸಿಪಿಐ ಶ್ರೀಕಾಂತ್, ಪಿಎಸ್‌ಐ ಕರಿಬಸಪ್ಪ, ಸೆಸ್ಕ್ ಇಇ ತಬಸ್ಸುಮ್ ಸೇರಿದಂತೆ ಅನೇಕರು ಇದ್ದರು.
೨೪ವೈಎಲ್‌ಡಿ ಚಿತ್ರ೦೧ ಯಳಂದೂರು ಪಟ್ಟಣದ ಬಳೇಪೇಟೆಯಲ್ಲಿ ಸೋಮವಾರ ಒವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಭೂಮಿಪೂಜೆ ನೆರವೇರಿಸಿದರು. ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು, ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು ಸೇರಿದಂತೆ ಅನೇಕರು ಇದ್ದರು.