ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯರನ್ನ ಸಮರ್ಥನೆ ಮಾಡಿಕೊಂಡ ಸಚಿವ ಹೆಚ್ ಸಿ ಮಹದೇವಪ್ಪ, ಸಿದ್ದರಾಮಯ್ಯ ದಲಿತರ ಜಮೀನು ಕಬಳಿಸಿದ್ರು ಎಂದು ಆರೋಪ ಮಾಡುತ್ತಾರೆ. ನಿಜಕ್ಕೂ ಬಿಜೆಪಿ ಜೆಡಿಎಸ್ ಗೆ ಎಸ್ಸಿ, ಎಸ್ಟಿ ಸಮುದಾಯ ಬಗ್ಗೆ ಕಾಳಜಿ ಇದೆಯೇ? ಎಂದು ಕಿಡಿಕಾರಿದರು.
ನಾಳೆ ಮೈಸೂರಿನ ಮಹರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ಹಿನ್ನೆಲೆ ಇಂದು ಸಚಿವರಾದ ಮಹದೇವಪ್ಪ, ಕೆ ವೆಂಕಟೇಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್, ಕೆಪಿಸಿಸಿ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪುಷ್ಪಅಮರನಾಥ್ ಸೇರಿ ಹಲವರು ಭಾಗಿಯಾಗಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ವಿಷಯವೇ ಅಲ್ಲದ ವಿಷಯಕ್ಕೆ ಪಾದಯಾತ್ರೆ ಮಾಡುತ್ತಿರುವ ವಿರೋಧ ಪಕ್ಷಗಳ ನಡೆ ಹಾಸ್ಯಾಸ್ಪದವಾಗಿದೆ. ವಿರೋಧ ಪಕ್ಷಗಳು ಅನುಸರಿಸುತ್ತಿರುವ ನಗೆಪಾಟಲಿನ ನಡುವಳಿಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಹಿನ್ನಡೆ ಉಂಟಾಗುತ್ತಿರುವುದು ದುಃಖದ ಸಂಗತಿ.
ಕಳೆದ ಇಪ್ಪತ್ತೈದು ದಿನಗಳಿಂದ ರಾಜ್ಯದಲ್ಲಿ ವಾಲ್ಮೀಕಿ ಹಗರಣ, ಮೂಡಾ 14 ನಿವೇಶನ, ಗ್ಯಾರಂಟಿ ಯೋಜನೆಗೆ ಪರಿಶಿಷ್ಟರ ಹಣ ಬಳಕೆ ಮಾಡಿಕೊಂಡರು ಎಂಬ ಈ ಮೂರು ವಿಷಯ ಪ್ರಸ್ತಾಪವನ್ನು ಬಿಜೆಪಿ ಮತ್ತು ಜೆಡಿಎಸ್ ಅವರು ಮಾಡುತ್ತಿದ್ದಾರೆ. ಅಧಿವೇಶನದ 15 ದಿನಗಳಲ್ಲಿ ಒಂದು ದಿನವೂ ಅಧಿವೇಶನ ನಡೆಯಲು ಸಹಕಾರ ನೀಡಲಿಲ್ಲ.
ರಾಜ್ಯದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು ಬಿಟ್ಟು, ರಾಜಕೀಯ ಉದ್ದೇಶ ಮತ್ತು ಹಿತಾಸಕ್ತಿ ಇಟ್ಟುಕೊಂಡು ಕೇಂದ್ರ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ಹಾಗೂ ಜೆಎಡಿಸ್ ಪಕ್ಷವು ರಾಜ್ಯಪಾಲರ ಮುಖಾಂತರ ರಾಜಭವನವನ್ನು ದುರುಪಯೋಗ ಮಾಡಿಕೊಂಡು ಜನರು ಬಹುಮತ ನೀಡಿ ಅಧಿಕಾರಕ್ಕೆ ತಂದಿರುವ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದು ಅತ್ಯಂತ ಖಂಡನೀಯ.
ಇದು ಏಕಾಏಕಿ ಪ್ರತಿಭಟನೆ, ಪಾದಯಾತ್ರೆ ಮಾಡಿದ್ದಲ್ಲ. ದಿಲ್ಲಿಯಲ್ಲಿ ಚರ್ಚಿಸಿ ರಾಜಭವನದೊಳಗೆ ಸಾಂವಿಧಾನಿಕ ಜವಾಬ್ದಾರಿ ನಿರ್ವಹಣೆ ಮಾಡಬೇಕಿದ್ದ ರಾಜ್ಯಪಾಲರು ಒಬ್ಬ ವ್ಯಕ್ತಿಯ ದೂರಿನ ಆಧಾರದ ಮೇಲೆ ತನಿಖೆಯನ್ನೆ ನಡೆಸದೆ ಒಂದು ಅರ್ಜಿಯ ಮೇಲೆ ನೋಟಿಸ್ ನೀಡಿರುವುದು ಸಂವಿಧಾನದ ವಿರುದ್ಧದ ನಡೆಯಾಗಿದೆ. ಇದು ಈಡೀ ಪ್ರಜಾಪ್ರಭುತ್ವಕ್ಕೆ ಹಾಗೂ ಸಂವಿಧಾನಕ್ಕೆ ಎಸಗಿದ ಅಪಚಾರವಾಗಿದೆ. ಸಂವಿಧಾನದ ರಕ್ಷಕರಾದ ರಾಜ್ಯಪಾಲರು ಸಂವಿಧಾನದ ಆಶಯವನ್ನು ಜಾರಿಮಾಡುವ ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿರುವುದು ಸರಿಯಲ್ಲ.
ಸ್ವಜನಪಕ್ಷಪಾತ ಮತ್ತು ಅಧಿಕಾರ ದುರುಪಯೋಗ ಮಾಡದ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿರುವುದು ಯಾಕಂತಲೇ ನನಗೆ ತಿಳಿಯುತ್ತಿಲ್ಲ. ಯಾವುದೇ ಅಕ್ರಮ ಹಾಗೂ ಅಧಿಕಾರ ದುರುಪಯೋಗ ಮಾಡದೆ ಕಾನೂನಿನ ಪ್ರಕಾರವೇ ನಿವೇಶನ ಪಡೆಯಲಾಗಿದೆ. ಇದರಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲ. ಆದರೂ ಅವರ ಹೆಸರು ಎಳೆದು ತರುತ್ತಿರುವುದು ಸಮಂಜಸವಲ್ಲ.
ಮುಡಾದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ಸದಸ್ಯರಾಗಿದ್ದಾರೆ. ಎಲ್ಲರ ತೀರ್ಮಾನದಂತೆ ನಿವೇಶನ ಹಂಚಲಾಗಿದೆ. ಆದರೂ ಸಿದ್ದರಾಮಯ್ಯ ಅವರು ದಲಿತರ ಭೂಮಿ ಪಡೆದರು ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ವಿರೋಧ ಪಕ್ಷಗಳು ಸುಮ್ಮನೆ ಕತೆ ಕಟ್ಟುತ್ತಿದ್ದಾರೆ.
ನೆರೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಕೇಂದ್ರದಿಂದ ಅನುದಾನ ತರುವ ಬಗ್ಗೆ ವಿರೋಧ ಪಕ್ಷಗಳು ಮಾತನಾಡುವುದಿಲ್ಲ. ಮೇಕೆದಾಟು ಹೋರಾಟ ಮಾಡುತ್ತೇವೆ ಎಂದೇಳಿ ಸುಮ್ಮನಾಗಿದ್ದಾರೆ. ರಾಜ್ಯದ ಜನರು ನಮ್ಮ ಪಕ್ಷಕ್ಕೆ 135 ಸ್ಥಾನ ನೀಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಅವರಿಗೆ ಜನಾದೇಶದ ಮೇಲೆ ನಂಬಿಕೆ ಇಲ್ಲ. ಅವರು ಎಂದೆಂದೂ ನೇರವಾಗಿ ಜನಾದೇಶ ಪಡೆದು ರಾಜ್ಯದಲ್ಲಿ ಸರ್ಕಾರವನ್ನು ನಡೆಸಲೇ ಇಲ್ಲ. ಜನರ ನಂಬಿಕೆಗೆ ದ್ರೋಹ ಮಾಡುವ ಕೆಲಸ ಮಾಡಿದ್ದಾರೆ. ಜನರ ಆದೇಶಕ್ಕೆ ಅಪಗೌರವ ತಂದಿದ್ದಾರೆ.
ವಾಲ್ಮೀಕಿ ನಿಗಮ ಹಗರಣದಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಈ ಪ್ರಕರಣ ತನಿಖೆ ನಡೆಯುತ್ತಿದ್ದು, ತಪ್ಪು ಮಾಡಿದವರನ್ನು ಈಗಾಗಲೇ ಜೈಲಿನಲ್ಲಿದ್ದು, ಕೆಲವರು ತಲೆಮರೆಸಿಕೊಂಡಿದ್ದಾರೆ. ತಪ್ಪು ಮಾಡಿದ ಎಲ್ಲರಿಗೂ ಶಿಕ್ಷೆಯಾಗಲಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಕ್ರಾಂತಿಕಾರಿ ಬದಲಾವಣೆ ತಂದಿರುವಂಥೆ ಮಾತನಾಡುವ ವಿರೋಧ ಪಕ್ಷಗಳು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದಾಗ ಎಲ್ಲಿದ್ದರು. ಸಾಮಾಜಿಕ ನ್ಯಾಯದ ಬಗ್ಗೆ ನಂಬಿಕೆ ಅವರಿಗೆ ನಂಬಿಕೆ ಎಲ್ಲಿದೆ. ಐಐಟಿ, ಐಎಎಂ ನಲ್ಲಿ ಎಷ್ಟು ಜನರ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರು ಎಷ್ಟು ಜನರಿದ್ದಾರೆ.
ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯಲ್ಲಿ 7ಡಿ ಬಳಿಸಿಕೊಂಡು ಹಣ ದುರ್ಬಳಕೆ ಮಾಡಿಕೊಂಡಾಗ ಇವರಿಗೆ ಗೊತ್ತಿರಲಿಲ್ಲವೇ. ಪಿಟಿಸಿಎಲ್ ಕಾಯ್ದೆಯನ್ನು ರದ್ದು ಮಾಡಿದಾಗ ತಮ್ಮ ಅಧಿಕಾರದ ಅವಧಿಯಲ್ಲಿ ಕಾಯ್ದೆಯನ್ನು ಮರುಜಾರಿ ಮಾಡಿ ಎಸ್‌ಸಿ, ಎಸ್‌ಟಿ ಜನರ ಆಸ್ತಿಯನ್ನು ಯಾಕೆ ರಕ್ಷಣೆ ಮಾಡಲಿಲ್ಲ. ನಿಮಗೆ ಎಸ್‌ಸಿ ಎಸ್‌ಟಿ ಜನರ ಮೇಲೆ ಕಾಳಜಿ ಇದೆಯೇ. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯನ್ನು ಜಾರಿ ಮಾಡಿ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಟ್ಟದ್ದು ನಮ್ಮ ಸರ್ಕಾರ. ಗುತ್ತಿಗೆ ಪದ್ದತಿಯಲ್ಲಿ ನೀವು ಮೀಸಲಾತಿ ನೀಡಿದ್ದೀರಾ. ಎಲ್ಲಾ ಮೊಸಳೆ ಕಣ್ಣೀರು ಸುರಿಸುತ್ತಾ ಸಂವಿಧಾನಕ್ಕೆ ವಿರುದ್ಧವಾಗಿದ್ದೀರಿ.
ರಾಜಕೀಯ ಹುನ್ನಾರದಿಂದ ಸಿದ್ದರಾಮಯ್ಯರನ್ನು ದುರ್ಬಲ ಮಾಡಲು ಯತ್ನಿಸುತ್ತಿರುವು, ಸಮಾಜವಾದಿ ಸಿದ್ದಾಂತ ಮೂಲಕ ಹೋರಾಟ ಮಾಡಿ ರೈತ ಚಳುವಳಿ ಮುಖೇನ ಜೀವನದ ಉದ್ದಕ್ಕೂ ಪ್ರಮಾಣಿಕತೆ ಮೈಗೂಡಿಸಿಕೊಂಡಿರು ಒಬ್ಬ ನಾಯಕನ ಮುಖಕ್ಕೆ ಮಸಿ ಬಳೆಯುವ ಪ್ರಯತ್ನದಲ್ಲಿ ಯಶಸ್ಸು ಕಾಣ ಸಾಧ್ಯವೇ?
ನೈತಿಕತೆ ಬರಿ ಮಾತಿನಿಂದ ಬರುವುದಿಲ್ಲ. ನಿರ್ಧಾರ ಮತ್ತು ನಿಲುವುಗಳಿಂದ ಬರುವಂತದ್ದು. ಯಾರಾರ ನೈತಿಕತೆ ಎಷ್ಟಿದೆ ಎಂಬುದು ಗೊತ್ತಿದೆ. ಇದನ್ನೆಲ್ಲಾ ಇಟ್ಟುಕೊಂಡು ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ.
ಜನರು ಕಷ್ಟದಲ್ಲಿದ್ದಾರೆ. ನೆರೆಯಿಂದ ಜನರು ಜಾನುವಾರು, ಕೃಷಿ ಭೂಮಿಗಳು ಹಾಳಾಗುತ್ತಿವೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಒಂದು ಪೈಸೆಯೂ ಜನರಿಗೆ ತಲುಪಿಲ್ಲ. ಹೀಗಿರುವಾಗ ಬಹುಮತ ಇರುವ ಸರ್ಕಾರವನ್ನು ಬೀಳಿಸಿ ನವೆಂಬರ್ ಹೊತ್ತಿಗೆ ಸರ್ಕಾರ ರಚಿಸುವುದಾಗಿ ಹೇಳುತ್ತೀರುವುದು ಸಾಧ್ಯವೇ ನಿಮಗೆ.
ಗಂಭೀರ ವಿಷಯಗಳಿಗೆ ಹೋರಾಟ ಮಾಡುವುದು ಬಿಟ್ಟು ವಿಷಯವೇ ಅಲ್ಲದ ವಿಷಯಕ್ಕೆ ಮೂರ್ನಾಲ್ಕು ಗುಂಪು ಮಾಡಿಕೊಂಡು, ಹೊಡೆದಾಡಿಕೊಂಡು ಮೈಸೂರು ಚಲೋ ಪಾದಯಾತ್ರೆ ನಡೆಸಲಾಗುತ್ತಿದೆ. ನಿಮ್ಮದೇ ಪಕ್ಷದ ಯತ್ನಾಳ್ ಅವರ ಪ್ರಶ್ನೆಗೆ ಉತ್ತರ ಕೊಡಿ ಮೊದಲು.
ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದಿರುವ ನಿಮ್ಮ ವಿರುದ್ಧ ಜನಾಂದೋಲನ ಸಂಘಟನೆ ಮಾಡಿದ್ದೇವೆ. ಚಳುವಳಿ ವ್ಯಕ್ತಿತ್ವವನ್ನು ರೂಪಿಸುತ್ತದೆ. ವ್ಯಕ್ತಿತ್ವದಿಂದ ಮೌಲ್ಯ ಬರುತ್ತದೆ. ಮೌಲ್ಯಗಳು ಚರಿತ್ರೆ ನಿರ್ಮಾಣ ಮಾಡುತ್ತದೆ. ಅಂತಹ ಹಿನ್ನೆಲೆಯಲ್ಲಿ ಬಂದಿವವರು ನಾವಾಗಿದ್ದೇವೆ.
ನಾಳೆ ರಾಜ್ಯದ ಉದ್ದಗಲಕ್ಕೂ ಸಮಾವೇಶಕ್ಕೆ ಜನ ಸೇರಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನ ರಾಜಕೀಯ ಕುಟಿಲ ನೀತಿಯನ್ನು ಬಿಚ್ಚಿಡಲಿದ್ದೇವೆ. ಕುತಂತ್ರದ ರಾಜಕಾರಣವನ್ನು ಜನರಿಗೆ ಮನವರಿಕೆ ಮಾಡುತ್ತೇವೆ. ವ್ಯಕ್ತಿಗತ, ಸ್ವಾರ್ಥ ಹಾಗೂ ಸಂವಿಧಾನದ ವಿರುದ್ಧವಾದ ನಿಮ್ಮ ರಾಜಕೀಯ ಬಣ್ಣವನ್ನು ಬಯಲು ಮಾಡಲಿದ್ದೇವೆ. ನಿಮ್ಮ ಕುಟಿಲ ರಾಜಕೀಯವನ್ನು ನಿಲ್ಲಿಸಿ, ರಾಜ್ಯದ ಅಭಿವೃದ್ಧಿ ಮಾಡಲಿದ್ದೇವೆ ಎಂದರು.