ಬೆಂಗಳೂರು: ಅವಧಿ ಮುಗಿದ ಔಷಧಿಯನ್ನು ಕುರಿಗಳಿಗೆ ನೀಡಿ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಕುರಿ ಮಾಲೀಕರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡರು ಸರ್ಕಾರವನ್ನು ಒತ್ತಾಯಿಸಿದರು.
ವಿಧಾನ ಪರಿಷತ್ ಕಲಾಪದ ಸೂನ್ಯ ವೇಳೆಯಲ್ಲಿ ಮಾತನಾಡಿದ ಅವರು ಕೃಷಿ ಮತ್ತು ಹೈನುಗಾರಿಕೆ ರೈತರ ಬೆನ್ನೆಲುಬಾಗಿದ್ದು ಹೈನುಗಾರಿಕೆಯನ್ನು ನಡೆಸುವ ರೈತರ ಗೋಳನ್ನು ಕೇಳುವವರಿಲ್ಲದಾಗಿದೆ. ಇದಕ್ಕೆ ನಿದರ್ಶನವಾಗಿ ದಿನಾಂಕ: ೧೩-೦೭-೨೦೨೪ರಂದು ಕನಕಪುರ ತಾಲ್ಲೂಕು ಹೆಗ್ಗನೂರುದೊಡ್ಡಿ ಗ್ರಾಮದ ಮುತ್ತುರಾಜರವರ ಕುರಿಗಳಿಗೆ ಜಂತುಹುಳು ಔಷಧಿ ಹಾಕಿಸಲು ಕನಕಪುರ ತಾಲ್ಲೂಕು ಉಯ್ಯಂಬಳ್ಳಿ ಸರ್ಕಾರಿ ಪಶು ಚಿಕಿತ್ಸಾಲಯಕ್ಕೆ ತೆರಳಿದಾಗ ಅಲ್ಲಿನ ಇನ್ಸ್‌ಪೆಕ್ಟರ್ ವಿನೋದ್‌ರವರು ಔಷಧಿ ಬಾಟಲ್ ಮೇಲಿನ ಅವಧಿ ಮೀರಿದ ಲೇಬಲ್ ತೆಗೆದು ಅದರ ಜೊತೆ ಸಿರೆಂಜ್ ಕೊಟ್ಟು ವೈದ್ಯರ ಕೊರತೆ ಇದೆ ನೀವೇ ಕುರಿಗಳಿಗೆ ಹಾಕಿಕೊಳ್ಳಿರಿ ಎಂದು ಔಷಧಿ ನೀಡಿದ್ದರು.
ಈ ಔಷಧಿಯನ್ನು ಹಾಕಿದ ನಂತರ ೧೩ ಕುರಿಗಳು, ೭ ಕುರಿಮರಿಗಳು ೩ ದಿನದಲ್ಲೇ ಸಾವನ್ನಪ್ಪಿವೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಕುರಿಗಳಿಗೆ ಕಣ್ಣು ಕಾಣಿಸುತ್ತಿಲ್ಲ. ಇನ್ನೂ ಕೆಲವು ಕುರಿಗಳು ನಿತ್ರಾಣಗೊಂಡು ಸಾಯುವ ಸ್ಥಿತಿಯಲ್ಲಿವೆ. ಇದರಿಂದ ರೈತನಿಗೆ ಸುಮಾರು ೬ ಲಕ್ಷ ರೂಪಾಯಿಗಳು ನಷ್ಟವಾಗಿದೆ. ಆದ್ದರಿಂದ ಕುರಿಗಳ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು, ಕುರಿಗಳ ಸಾವಿನಿಂದ ನಷ್ಟವಾಗಿರುವ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ಮಂಜೂರು ಮಾಡಬೇಕೆಂದು ಪಶು ಸಂಗೋಪನಾ ಸಚಿವರಾದ ಕೆ. ವೆಂಕಟೇಶ್‌ರವರನ್ನು ಒತ್ತಾಯಿಸಿದರು.