ಬೆಂಗಳೂರು: ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ವಿಶ್ವ ಮಾನವರಾಗಿಯೇ ಇಹಲೋಕ ತ್ಯಜಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ, ವಿವಿಧ ಕ್ಷೇತ್ರಗಳ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯರನ್ನು ಸನ್ಮಾನಿಸಿ ಮಾತನಾಡಿದರು.
ಹಿರಿಯ ನಾಗರಿಕರಿಗೆ ನೀಡುತ್ತಿರುವ ಮಾಸಾಶನವನ್ನು ಮುಂದಿನ ಬಜೆಟ್‌ನಲ್ಲಿ ಹೆಚ್ಚಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಹಿರಿಯ ನ್ಯಾಯವಾದಿ ಪಿ ಎಸ್ ರಾಜಗೋಪಾಲ್, ಯೋಗಪಟು ಡಿ ನಾಗರಾಜ್, ಸಂಬಾಳ ವಾದಕ ಹನಮಂತ ಗೋವಿಂದಪ್ಪ ಹೂಗಾರ, ನಿವೃತ್ತ ಕುಲಪತಿ ಆರ್.ಆರ್ ಹಂಚಿನಾಳ, ಸಮಾಜ ಸೇವಕ ವೀರಭದ್ರಪ್ಪ ಶರಣಪ್ಪ ಉಪ್ಪಿನ, ನಿವೃತ್ತ ಶಿಕ್ಷಕರಾದ ಎಚ್.ಎಸ್. ಗಿರಿರಾಜ್ ಎಲ್ಲರೂ ನಮಗೆ ಮಾದರಿ ಮತ್ತು ಮಾರ್ಗದರ್ಶಕರು. ಇವರ ಬದುಕಿನ ಮೌಲ್ಯಗಳು ಸಮಾಜವನ್ನು ಬೆಳಗುತ್ತವೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಹಿರಿಯ ನಾಗರಿಕರ ಸ್ಮರಣೆ ಕೇವಲ ಈ ಒಂದು ದಿನಕ್ಕೆ ಸೀಮಿತವಾಗಬಾರದು. ಹಿರಿಯ ನಾಗರಿಕರ ಅನುಭವ ನಮಗೆಲ್ಲರಿಗೂ ಸಂಪನ್ಮೂಲ ಆಗಬೇಕು. ಹಿರಿಯರ ಅನುಭವದ ಮಾತುಗಳು ನಮಗೆ ಬಹಳ ಮುಖ್ಯ ಎಂದರು. ಹಿರಿಯ ನಾಗರಿಕರಿಗೆ ೧,೨೦೦ ರೂಪಾಯಿ ಮಾಸಾಶನ ಬರುತ್ತಿದ್ದು, ಈ ಮೊತ್ತವನ್ನು ೨,೦೦೦ ರೂಪಾಯಿಗೆ ಏರಿಸಬೇಕು ಎಂದು ಇದೇ ವೇಳೆ ಮುಖ್ಯಮಂತ್ರಿಗಳಿಗೆ ಸಚಿವರು ಮನವಿ ಮಾಡಿದರು. ರಾಜ್ಯದಲ್ಲಿ ಸುಮಾರು ೪೮ ಲಕ್ಷ ವೃದ್ಧರಿಗೆ ವೃದ್ಧಾಪ್ಯವೇತನ ನೀಡುತ್ತಿದ್ದು, ಸುಮಾರು ೫೮ ಲಕ್ಷ ಮಂದಿ ಹಿರಿಯ ನಾಗರಿಕರಿದ್ದಾರೆ. ವೃದ್ಧಾಪ್ಯ ವೇತನವನ್ನು ೨ ಸಾವಿರ ರೂಪಾಯಿಗೆ ಏರಿಸಬೇಕು ಎಂದು ಕೇಳಿಕೊಂಡರು. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

ರಾಜ್ಯದಲ್ಲಿರುವ ಕೆಲ ವೃದ್ಧಾಶ್ರಮಗಳಲ್ಲಿ ಹಲವು ನೂನ್ಯತೆಗಳನ್ನು ಗಮನಿಸಿದ್ದೇನೆ. ಈ ಕೇಂದ್ರಗಳಲ್ಲಿ ಹಿರಿಯರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ.ಜಿ.ಸಿ. ಪ್ರಕಾಶ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಎನ್.ಸಿದ್ದೇಶ್ವರ ಉಪಸ್ಥಿತರಿದ್ದರು.