Sunday, April 20, 2025
Google search engine

Homeರಾಜ್ಯಆ.2 ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಸಮೀಕ್ಷೆ ಮತ್ತು ಚಿಕಿತ್ಸಾ ಅಭಿಯಾನ

ಆ.2 ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಸಮೀಕ್ಷೆ ಮತ್ತು ಚಿಕಿತ್ಸಾ ಅಭಿಯಾನ



ಚಿತ್ರದುರ್ಗ: ಜಿಲ್ಲೆಯ ಎಲ್ಲಾ ವಸತಿ ನಿಲಯದ ವಿದ್ಯಾರ್ಥಿಗಳು, ವೃದ್ಧಾಶ್ರಮದ ನಿವಾಸಿಗಳು, ಕಲ್ಲು, ಕ್ವಾರಿ ಗಣಿಗಾರಿಕೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಹಾಗೂ ಸಣ್ಣ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು, ಅಂಗನವಾಡಿ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಿ, ವೇಳಾಪಟ್ಟಿ ತಯಾರಿಸಿ ಆ ಮೂಲಕ ನಿಗದಿತ ದಿನಗಳಂದು ಶಿಬಿರ ಆಯೋಜಿಸಿ ಕ್ಷಯರೋಗ ಪತ್ತೆ ಕಾರ್ಯಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಕ್ರಿಯ ಕ್ಷಯರೋಗ ಪತ್ತೆ ಹೆಚ್ಚುವ ಸಮೀಕ್ಷಾ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಣ್ಣ ಕೈಗಾರಿಕೆ ಇಲಾಖೆಗಳು ಅಗತ್ಯ ಸಹಕಾರ ನೀಡುವ ಮೂಲಕ ಕ್ಷಯರೋಗ ಸಕ್ರಿಯ ಪ್ರಕರಣಗಳ ಪತ್ತೆ ಕಾರ್ಯ ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಒ.ಸುಧಾ ಮಾತನಾಡಿ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ 2023ರ ಜುಲೈ 17 ರಿಂದ ಆಗಸ್ಟ್ 02 ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಸಮೀಕ್ಷೆ ಮತ್ತು ಚಿಕಿತ್ಸಾ ಅಭಿಯಾನಕ್ಕೆ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಆರೋಗ್ಯ ಸಿಬ್ಬಂದಿ ತಂಡ ಮನೆ ಮನೆಗೆ ಭೇಟಿ ನೀಡಿ, ತಪಾಸಣೆ ನಡೆಸಲಾಗುತ್ತಿದೆ. ರೋಗ ಲಕ್ಷಣವಿರುವರ ಕಫ ಮಾದರಿ ಸಂಗ್ರಹಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 18,46,861 ಜನಸಂಖ್ಯೆ ಇದ್ದು, ಹೆಚ್ಚು ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ಆದ್ಯತೆ ನೀಡಿ, ಕ್ಷಯ ರೋಗ ಪ್ರಕರಣಗಳನ್ನು ಪತ್ತೆಹಚ್ಚಲು 3,31,550 ಜನರನ್ನು ತಪಾಸಣೆಗೊಳಪಡಿಸುವ ಗುರಿ ಹೊಂದಲಾಗಿದ್ದು, 2652 ಸದಸ್ಯರನ್ನು ಒಳಗೊಂಡ 1326 ತಂಡ ರಚಿಸಲಾಗಿದೆ ಎಂದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಮಾತನಾಡಿ, ಉನ್ನತೀಕರಣಗೊಂಡ ಜಿಲ್ಲೆಯ 29 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಶ್ರೂಷಕಿಯರು, ಪ್ರಯೋಗ ಶಾಲಾ ತಂತ್ರಜ್ಞರ ಹುದ್ದೆ ಮಂಜೂರಾತಿಯಾಗಿಲ್ಲ. ಆದಾಗ್ಯೂ ಈ ಕೇಂದ್ರಗಳಲ್ಲಿ ನಿಯೋಜನೆ ಮೇರೆಗೆ ಪ್ರಯೋಗಾಲಯಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಸಿಬ್ಬಂದಿ ಕೊರತೆಗೆ ಸಂಬಂಧಪಟ್ಟಂತೆ ಈಗಾಗಲೇ ಇಲಾಖೆ ಆಯುಕ್ತರ ಗಮನಕ್ಕೆ ತರಲಾಗಿದ್ದು, ಡಿಎಂಎಫ್ ನಡಿ ಹೊರಗುತ್ತಿಗೆಯಲ್ಲಿ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಪ್ರಸ್ತಾವವನ್ನೂ ಸಲ್ಲಿಸಲಾಗಿದೆ, ಜೊತೆಗೆ ಎನ್‍ಹೆಚ್‍ಎಂ. ನಲ್ಲಿ ಹೊರಗುತ್ತಿಗೆಯಡಿ ಆರೋಗ್ಯ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ರಾಂಜಿನಾಯಕ್, ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ಎನ್.ಯಶೋಧರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

RELATED ARTICLES
- Advertisment -
Google search engine

Most Popular