ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಸೇರಿದಂತೆ ಇತರೆ ನಾಲ್ವರು ಆರೋಪಿಗಳ ಎರಡು ದಿನಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯಗೊಳ್ಳುವ ಹಿನ್ನೆಲೆ , ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈ ವೇಳೆ ನ್ಯಾಯಾಲಯದ ಬಳಿ ದರ್ಶನ್ ಅಭಿಮಾನಿಗಳು ಹೆಚ್ಚಾಗಿ ಸೇರುವ ಸಾಧ್ಯತೆ ಹಿನ್ನೆಲೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.
ಕೆಎಸ್ಆರ್ ಪಿ ಪೊಲೀಸ್ ಸಹಿತ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇಂದು ನ್ಯಾಯಾಲಯ ನಟ ದರ್ಶನ್‌ರನ್ನ ಮತ್ತೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ರೆ ಪರಪ್ಪನ ಅಗ್ರಹಾರ ಜೈಲಿನ ಬಳಿಯೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನ ಬಳಿಯೂ ಸೂಕ್ತ ಬಂದೋಬಸ್ತ್ ಗೆ ಸೂಚನೆ ನೀಡಲಾಗಿದೆ.
ಗುರುವಾರ ದರ್ಶನ್ ಸೇರಿದಂತೆ ನಾಲ್ವರನ್ನು ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದ ಪೊಲೀಸರು. ಈ ಅವಧಿ ಮುಕ್ತಾಯವಾದ ಹಿನ್ನೆಲೆ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಇನ್ನು ಹೆಚ್ಚು ದಿನ ಕಸ್ಟಡಿಗೆ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎನ್ನಲಾಗಿದೆ. ಈಗಾಗಲೇ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಪವಿತ್ರಾಗೌಡ ಸೇರಿದಂತೆ 13 ಆರೋಪಿಗಳ ಸೆರೆಮನೆ ವಾಸ ಶುರುವಾಗಿದೆ. ಹೀಗಾಗಿ ಬಾಕಿ ಉಳಿದಿರುವ ದರ್ಶನ್ ಸೇರಿ ನಾಲ್ವರು ಶನಿವಾರ ಸಂಜೆ ವೇಳೆಗೆ ಪೊಲೀಸ್ ಠಾಣೆಯ ಲಾಕಪ್‌ನಿಂದ ಸೆಂಟ್ರಲ್ ಜೈಲ್‌ನ ಕತ್ತಲ ಕೋಣೆಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಇಂದು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯ, ಪರಪ್ಪನ ಅಗ್ರಹಾರ ಜೈಲಿನ ಸುತ್ತ ಸೇರುವ ಸಾಧ್ಯತೆಯಿದೆ. ಇಂದು ದರ್ಶನ್‌ನ ಮುಂದಿನ ಭವಿಷ್ಯ ತಿಳಿಯಲಿದೆ.
ಇಂದು ಕಸ್ಟಡಿ ಅವಧಿ ಮುಕ್ತಾಯವಾಗುವ ಹಿನ್ನೆಲೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಆರೋಪಿಗಳಿಗೆ ಪೊಲೀಸರು ಮೆಡಿಕಲ್ ಟೆಸ್ಟ್ ಮಾಡಿಸಲಿದ್ದಾರೆ. ಆರೋಪಿಗಳಾದ ನಟ ದರ್ಶನ್, ಪ್ರದೂಶ್, ವಿನಯ್, ಧನರಾಜ್ ಸೇರಿ ನಾಲ್ವರಿಗೂ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿಯೇ ಮಲ್ಲತ್ತಹಳ್ಳಿಯ ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಮೆಡಿಕಲ್ ಟೆಸ್ಟ್ ಮಾಡಿಸಿದ ಬಳಿಕ ಮಧ್ಯಾಹ್ನ ಕೋರ್ಟ್ ಗೆ ಪೊಲೀಸರು ಕರೆದೊಯ್ಯಲ್ಲಿದ್ದಾರೆ.