ಬೆಂಗಳೂರು : ಮೊದಲ ಬಾರಿಗೆ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು, ಐಎಎಸ್ ಅಧಿಕಾರಿಯಾಗಿದ್ದ, ಬಿಜೆಪಿ ಮುಖಂಡ, ನಟ ಕೆ ಶಿವರಾಂ ಅವರು ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದಾರೆ. ಬುಧವಾರ ಅವರಿಗೆ ಹೃದಯಾಘಾತವಾಗಿತ್ತು. ಅವರನ್ನು ಬೆಂಗಳೂರಿನ ಹೆಚ್‌ಸಿಜಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ, ಗುರುವಾರ ಮೃತಪಟ್ಟಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿ ಬಳಿಯ ಉರುಗಳ್ಳಿಯ ಹಾರ್ಮೋನಿಯಂ ಮೇಷ್ಟ್ರು ಕೆಂಪಯ್ಯನವರ ಮಗನಾಗಿ ೧೯೫೩ರಲ್ಲಿ ಜನಿಸಿದ್ದ ಶಿವರಾಂ, ೧೯೮೫ರಲ್ಲಿ ಕೆಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಬಳಿಕ ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯೂ ಆಗಿದ್ದರು. ಆ ಮೂಲಕ ಕನ್ನಡದಲ್ಲಿ ಐಎಎಸ್ ಬರೆದು ಅಧಿಕಾರಿಯಾದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದರು. ೧೯೯೩ರಲ್ಲಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದ ಶಿವರಾಂ ಅವರು, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ `ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದರು. ವಸಂತ ಕಾವ್ಯ, ಖಳನಾಯಕ, ಸಾಂಗ್ಲಿಯಾನ-೩, ಪ್ರತಿಭಟನೆ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್ ಹಾಗೂ ಟೈಗರ್ ಸಿನಿಮಾಗಳಲ್ಲಿ ನಟಿಸಿದ್ದರು.
೨೦೧೩ರಲ್ಲಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ, ಸ್ವಯಂ ನಿವೃತ್ತಿ ಪಡೆದ ಅವರು ಕಾಂಗ್ರೆಸ್ ಸೇರಿ, ರಾಜಕಾರಣಿಯಾಗಿದ್ದರು. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ, ಸೋಲುಂಡಿದ್ದರು. ಬಳಿಕ, ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದ್ದರು. ಅಲ್ಲದೆ, ಛಲವಾದಿ ಮಹಸಭಾ ಅಧ್ಯಕ್ಷರೂ ಆಗಿದ್ದರು.