ಮುಂಬೈ: ರೂಪದರ್ಶಿ ಹಾಗೂ ನಟಿ ಪೂನಮ್ ಪಾಂಡೆ ಗರ್ಭಕಂಠದ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. ಅವರಿಗೆ ೩೨ ವರ್ಷ ವಯಸ್ಸಾಗಿತ್ತು. ಈ ಸುದ್ದಿಯನ್ನು ಅವರ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಮಾಹಿತಿ ನೀಡಿದೆ. ಗರ್ಭಕಂಠದ ಕ್ಯಾನ್ಸರ್‌ನಿಂದ (Cervical Cancer) ಅವರು ಬಳಲುತ್ತಿದ್ದರು.
೨೦೧೩ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ ‘ನಶಾ’ದಲ್ಲಿ ನಟಿಸುವ ಮೂಲಕ ಪಾಂಡೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದ ನಟಿ, ಬೋಲ್ಡ್ ಫೋಟೋಶೂಟ್ ಗಳಿಂದಲೂ ಜನಪ್ರಿಯರಾಗಿದ್ದರು. ಪೂನಂ ಪಾಂಡೆ ಹೆಸರಿನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿಧನದ ಸುದ್ದಿ ಪೋಸ್ಟ್ ಮಾಡುತ್ತಿದ್ದಂತೆ, ಹಲವು ಪ್ರಶ್ನೆಗಳೆದ್ದವು. ಹೆಚ್ಚಿನವರಿಗೆ ಈ ಸುದ್ದಿಯನ್ನು ನಂಬಲು ಸಾಧ್ಯವಾಗಿಲ್ಲ. ನಕಲಿ ಇರಬಹುದು ಎಂದು ಹಲವರು ಅಂದಾಜಿಸಿದ್ದರು. ಈ ಹಿನ್ನೆಲೆಯಲ್ಲಿ ನಿಖರ ಮಾಹಿತಿ ನೀಡುವಂತೆ ಬೇಡಿಕೆಗಳು ಬಂದವು. ಆದರೆ ನಟಿಯ ತಂಡದಿಂದ ಈ ಪೋಸ್ಟ್ ಶೇರ್ ಮಾಡಿದಂತಿದ್ದು, ಬರಹಗಳು ನಕಲಿ ಅಥವಾ ತಮಾಷೆಯಂತೆ ತೋರುತ್ತಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಪೂನಂ ಪಾಂಡೆ ೨೦೨೨ರಲ್ಲಿ ಕಂಗನಾ ರಣಾವತ್ ನಿರೂಪಣೆಯ ರಿಯಾಲಿಟಿ ಶೋ ‘ಲಾಕ್ ಅಪ್’ ಸೀಸನ್ ೧ರಲ್ಲಿ ಭಾಗವಹಿಸಿದಾಗಲೂ ಸಖತ್ ಸದ್ದು ಮಾಡಿದ್ದರು. ಇನ್ನು ನಟಿಯ ಸಾವಿನ ಸುದ್ದಿಗೆ ಪ್ರತಿಕ್ರಿಯಿಸಿದ ಓರ್ವ ವ್ಯಕ್ತಿ, “ಕಳೆದುಕೊಂಡೆವಾ ಇದು ಫೇಕ್ ಅಥವಾ ಫನ್ ಪೋಸ್ಟ್ ಅಲ್ಲ ಎಂದು ಭಾವಿಸುತ್ತೇವೆ” ಎಂದು ತಿಳಿಸಿದ್ದಾರೆ. ಮತ್ತೊಬ್ಬರು, “ಇದು ಮಾರ್ಕೆಟಿಂಗ್ ಗಿಮಿಕ್ ಅಲ್ಲ ಎಂದು ಭಾವಿಸುತ್ತೇನೆ, ರೆಸ್ಟ್ ಇನ್ ಪೀಸ್ ಎಂದು ಬರೆದಿದ್ದಾರೆ. ಅಭಿಮಾನಿಯೊಬ್ಬರು, “ಅಕೌಂಟ್ ಹ್ಯಾಕ್ ಆಗಿದೆಯೇ” ಎಂದು ಪ್ರಶ್ನಿಸಿದ್ದಾರೆ. ”ನಮ್ಮನ್ನೇಕೆ ಒಂಟಿಯಾಗಿ ಬಿಟ್ಟುಹೋದ್ರಿ ಎಂದು ಇನ್ನೋರ್ವರು ಬೇಸರ ವ್ಯಕ್ತಪಡಿಸಿದ್ದಾರೆ.



