ಬೆಂಗಳೂರು: ಚಿತ್ರನಟಿ ಪ್ರಿಯಾಂಕಾ ಉಪೇಂದ್ರ ಅವರ ಫೇಸ್ ಬುಕ್ ಖಾತೆಯನ್ನು ಸೈಬರ್ ಖದೀಮರು ಹ್ಯಾಕ್ ಮಾಡಿರುವ ಘಟನೆ ಸೋಮವಾರ ನಡೆದಿದೆ. ಅಲ್ಲದೇ ತಾವು ತುರ್ತು ಪರಿಸ್ಥಿತಿಯಲ್ಲಿ ಸಿಲುಕಿರುವುದಾಗಿ ಅವರ ಸ್ನೇಹಿತರ ಬಳಿ ಖದೀಮರು ಪ್ರಿಯಾಂಕಾ ಸೋಗಿನಲ್ಲಿ ಮೆಸೇಜ್ ಮಾಡಿ ಲಕ್ಷಾಂತರ ರೂ. ಲಪಟಾಯಿಸಿದ್ದಾರೆ.
ಈ ಕುರಿತು ಪ್ರಿಯಾಂಕಾ ಉಪೇಂದ್ರ ಮಾಧ್ಯಮಗಳೊಂದಿಗೆ ಸ್ಪಷ್ಟನೆ ನೀಡಿದ್ದು ತಮ್ಮ ಸಾಮಾಜಿಕ ಜಾಲತಾಣ ಖಾತೆ ಹ್ಯಾಕ್ ಆಗಿದ್ದು, ತಮ್ಮ ಆಪ್ತರ ಬಳಿ ಹಣ ಕೇಳಲಾಗುತ್ತಿದೆ. ದಯಮಾಡಿ ಯಾರೂ ಹಣ ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ತಮ್ಮ ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಈಗಾಗಲೇ ಹಲವರ ಬಳಿ ನಾನು ತುರ್ತು ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದಿರುವುದಾಗಿ ಹೇಳಿ ಲಕ್ಷಾಂತರ ರೂ. ಹಣವನ್ನು ಅವರ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಇದಕ್ಕೂ ನನಗೂ ಸಂಬಂಧವಿಲ್ಲ. ದಯಮಾಡಿ ಯಾರೂ ಸಹ ನನ್ನ ಖಾತೆಯಿಂದ ಹಣಕ್ಕೆ ಬೇಡಿಕೆ ಬಂದರೆ ನನಗಾಗಲೀ, ಉಪೇಂದ್ರ ಅವರಿಗಾಗಲೀ ಸಂಪರ್ಕಿಸದೆ ಹಣ ಕಳೆದುಕೊಳ್ಳಬಾರದು ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.
ಈ ಕುರಿತು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಖದೀಮರ ಪತ್ತೆಗೆ ತನಿಖೆಗೆ ನಡೆಸಲಾಗುತ್ತಿದೆ.