ಕನ್ನಡತಿ ಧಾರವಾಹಿ ಮೂಲಕ ಎಲ್ಲರ ಮನಗೆದ್ದಿರುವ ನಟಿ ರಂಜನಿ ರಾಘವನ್ ಇದೀಗ ತಮ್ಮ ಬಾಳ ಸಂಗಾತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಎಲ್ಲರಿಗೂ ಪರಿಚಯಿಸಿದ್ದಾರೆ. ಇವರ ಈ ಫೋಟೋ ಭಾರಿ ವೈರಲ್ ಆಗಿದ್ದು, ಶುಭಾಶಯಗಳ ಹೊಳೆಯೇ ಹರಿದು ಬರುತ್ತಿದೆ.
ವೃತ್ತಿಯಲ್ಲಿ ಅಥ್ಲೆಟ್ ಆಗಿರುವ ಸಾಗರ್ ಭಾರಧ್ವಜ್ ಎಂಬವರನ್ನು ರಂಜನಿ ಕೈಹಿಡಿಯಲಿದ್ದಾರೆ. ಸಾಗರ್ ರನ್ನರ್, ಸೈಕಲಿಸ್ಟ್, ಬೈಕರ್ ಕೂಡ ಆಗಿದ್ದಾರೆ. ಮದುವೆ ಹಾಗೂ ನಿಶ್ಚಿತಾರ್ಥದ ದಿನಾಂಕದ ಬಗ್ಗೆ ನಟಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಂಜನಿ ಅವರ ‘ಕಾಂಗರೂ’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.
ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ರಂಜನಿ ರಾಘವನ್ 1994ರ ಮಾರ್ಚ್ 29ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಎಂಬಿಎ ಮುಗಿಸಿರುವ ಇವರು ಓರ್ವ ಸೃಜನಶೀಲ ಬರಹಗಾರ್ತಿಯೂ ಆಗಿದ್ದಾರೆ.
‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ನಾಯಕಿಯಾಗಿ ಕಿರುತೆರೆಗೆ ಎಂಟ್ರಿಕೊಟ್ಟ ಇವರು ಬಳಿಕ ಪೌರ್ಣಮಿ ಎಂಬ ಮಲಯಾಳಂ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದರು. ಅನಂತರ ‘ಇಷ್ಟದೇವತೆ’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಇದರ ಕಥೆಯನ್ನು ತಾವೇ ಬರೆದು ನಿರ್ದೇಶಕಿಯಾಗಿ ಗುರುತಿಸಿಕೊಂಡರು.
ಬಳಿಕ ಕನ್ನಡತಿ ಧಾರವಾಹಿ ಮೂಲಕ ಮನೆಮಾತಾದ ಇವರು 2017ರಲ್ಲಿ ‘ರಾಜಹಂಸ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಪ್ರವೇಶಿಸಿದರು. ಅನಂತರ ಪುಣ್ಯ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಫ್ಯೂ ಸೇರಿದಂತೆ ಕೆಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಕಥೆ ಡಬ್ಬಿ, ಸ್ವೈಪ್ ಅಪ್ ಎಂಬ ಪುಸ್ತಕ ಬಿಡುಗಡೆ ಮಾಡಿ ಸಾಹಿತ್ಯ ಪ್ರೇಮಿಗಳ ಮನಗೆದ್ದಿರುವ ನಟಿ ರಂಜನಿ ರಾಘವನ್ ಇದೀಗ ಹಸೆ ಮಣೆ ಏರಲು ಸಿದ್ದರಾಗಿದ್ದಾರೆ.