Friday, March 13, 2026
Google search engine

Homeರಾಜ್ಯಸುದ್ದಿಜಾಲಕಬ್ಬಿಗೆ ಹೆಚ್ಚುವರಿ ₹100 ; ಮಾ.20ರೊಳಗೆ ರೈತರಿಗೆ ಪಾವತಿಸಿ : ಜಿಲ್ಲಾಧಿಕಾರಿ ಶ್ರೀರೂಪಾ

ಕಬ್ಬಿಗೆ ಹೆಚ್ಚುವರಿ ₹100 ; ಮಾ.20ರೊಳಗೆ ರೈತರಿಗೆ ಪಾವತಿಸಿ : ಜಿಲ್ಲಾಧಿಕಾರಿ ಶ್ರೀರೂಪಾ

ಚಾಮರಾಜನಗರ : ಪ್ರತಿ ಟನ್‌ ಕಬ್ಬಿಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ₹100 ಘೋಷಿಸಿದ್ದು ಸಕ್ಕರೆ ಕಾರ್ಖಾನೆಗಳ ಪಾಲಿನ ಶೇ.50ರಷ್ಟನ್ನು ರೈತರಿಗೆ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ಸಭಾಂಗಣದಲ್ಲಿ ಕಾರ್ಖಾನೆ ಮುಖ್ಯಸ್ಥರು ಹಾಗೂ ಕಬ್ಬು ಬೆಳೆಗಾರರ ಸಂಘದ ಪ್ರಮುಖರ ಜೊತೆ ಸಭೆ ನಡೆಸಿದ ಜಿಲ್ಲಾಧಿಕಾರಿ ಶ್ರೀರೂಪ ಅವರು, 2025ರ ಜೂನ್‌ನಿಂದ 2026ರ ಫೆಬ್ರವರಿವರೆಗೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿರುವ ರೈತರಿಗೆ ಸರ್ಕಾರ ಹೆಚ್ಚುವರಿಯಾಗಿ 100 ಘೋಷಣೆ ಮಾಡಿದ್ದು, ಇದರಲ್ಲಿ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ತಲಾ ಶೇ 50ರಷ್ಟು ಭರಿಸಬೇಕಿದೆ. ಸರ್ಕಾರದ ಪಾಲಿನ ಹಣ ಬಿಡುಗಡೆಯಾಗಿದ್ದು, ಕಾರ್ಖಾನೆಗಳ ಪಾಲಿನ ಹಣವನ್ನು ಬಿಡುಗಡೆ ಮಾಡಬೇಕು. ಮಾರ್ಚ್ 20ರೊಳಗೆ ರೈತರ ಖಾತೆಗೆ ಹಣ ಪಾವತಿಯಾಗಬೇಕು ಎಂದು ಸೂಚಿಸಿದರು.

ಕಬ್ಬಿಗೆ ಪ್ರತಿ ಟನ್‌ಗೆ ಕಳೆದ ಸಾಲಿನಲ್ಲಿ 3,290 ದರ ನಿಗದಿಯಾಗಿದ್ದು, 100 ಹೆಚ್ಚುವರಿ ಸೇರಿಸಿ ಪಾವತಿಸಬೇಕು. ಕಾರ್ಖಾನೆಗಳಿಗೆ 5.96 ಲಕ್ಷ ಟನ್ ಕಬ್ಬು ಸರಬರಾಜಾಗಿದ್ದು ಎಲ್ಲ ಕಬ್ಬಿಗೂ ಹೆಚ್ಚುವರಿ 100 ಬಿಡುಗಡೆ ಮಾಡಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌ ಹಾಗೂ ಜಿಲ್ಲಾ ಕಾರ್ಯದರ್ಶಿ ಮೂಕಳ್ಳಿ ಮಹದೇವಸ್ವಾಮಿ ಒತ್ತಾಯಿಸಿದರು.

ಇನ್ನೂ ಕಬ್ಬು ಬೆಳೆಗಾರರ ಸಂಘದ ಹೋರಾಟದ ಫಲವಾಗಿ ರೈತರಿಗೆ ಹೆಚ್ಚುವರಿ 100 ಕೊಡಲು ಸರ್ಕಾರ ತೀರ್ಮಾನಿಸಿತ್ತು. ಅದರಂತೆ ರಾಜ್ಯ ಸರ್ಕಾರ ತನ್ನ ಪಾಲಿನ ₹ 300 ಕೋಟಿಯನ್ನು ಬಿಡುಗಡೆ ಮಾಡಿದ್ದು ಕಾರ್ಖಾನೆಗಳು ತಮ್ಮ ಪಾಲಿನ ಹಣ ಕೊಡಲು ಮೀನಾ ಮೇಷ ಎಣಿಸುತ್ತಿರುವುದೇಕೆ ಎಂದು ರೈತ ಮುಖಂಡರು ಸಭೆಯಲ್ಲಿ ಪ್ರಶ್ನಿಸಿದರು.

ತೂಕದಲ್ಲಾಗುವ ವಂಚನೆ ತಪ್ಪಿಸಲು ಕಾರ್ಖಾನೆ ಮುಂಭಾಗ ತೂಕದ ಯಂತ್ರ ಅಳವಡಿಸಲು ಒತ್ತಾಯ ಮಾಡುತ್ತಲೇ ಇದ್ದರೂ ಸ್ಪಂದನೆ ಸಿಕ್ಕಿಲ್ಲ. ಕಬ್ಬು ಕಟಾವು ಹಾಗೂ ಸಾಗಾಣಿಕೆ ರಾಜ್ಯದಾದ್ಯಂತ ಏಕ ರೀತಿಯಾಗಿರಬೇಕು. ಕಬ್ಬಿನ ಉತ್ಪನ್ನಗಳ ಲಾಭ ರೈತರಿಗೆ ಹಂಚಿಕೆ ಆಗಬೇಕು, ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿ ಆಗಬೇಕು ಎಂದು ಮುಖಂಡರು ಸಭೆಯಲ್ಲಿ ಒತ್ತಾಯಿಸಿದರು.

ಈ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ವಸುಂದರಾ ಹೆಗಡೆ, ಕುಂತೂರು ಸಕ್ಕರೆ ಕಾರ್ಖಾನೆಯ (ಟ್ರಾನ್ಸ್ ಪೋರ್ಟ್)ಉಪ ವ್ಯವಸ್ಥಾಪಕ ಪ್ರಭುಶಂಕರ್, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ಉಪಾಧ್ಯಕ್ಷ ಮೂಡಲಪುರ ಶಿವಮೂರ್ತಿ, ಹೆಚ್‍.ಮೂಕಳ್ಳಿ ಶಿವಕುಮಾರ್, ಕಾರ್ಯದರ್ಶಿ ಸುಂದ್ರಪ್ಪ, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಮಲೆಯೂರು ಸತೀಶ್, ಹೊನ್ನೇಗೌಡನಹಳ್ಳಿ ಮಹೇಶ್, ಪುಟ್ಟ ಮಲ್ಲೇಗೌಡ ಸಭೆಯಲ್ಲಿ ಇದ್ದರು.

RELATED ARTICLES
- Advertisment -
Google search engine

Most Popular