Sunday, April 20, 2025
Google search engine

Homeರಾಜ್ಯಹಾಸನ-ಮೈಸೂರು ಹೆಚ್ಚುವರಿ ರೈಲು ಸಂಚಾರ ಅಗತ್ಯ

ಹಾಸನ-ಮೈಸೂರು ಹೆಚ್ಚುವರಿ ರೈಲು ಸಂಚಾರ ಅಗತ್ಯ

ಹೊಳೆನರಸೀಪುರ: ಅರಸೀಕೆರೆ-ಹಾಸನ-ಹೊಳೆನರಸೀಪುರ ಮಾರ್ಗವಾಗಿ ಮೈಸೂರಿಗೆ ತೆರಳಲು ಬೆಳಿಗ್ಗೆ ರೈಲು ವ್ಯವಸ್ಥೆ ಕಲ್ಪಿಸುವಂತೆ ಪ್ರಯಾಣಿಕರು ಹಾಗೂ ಹಾಸನ ಜಿಲ್ಲಾ ಜನತೆ ಒತ್ತಾಯಿಸಿದ್ದಾರೆ.


ಬ್ರಾಡ್ ಗೇಜ್ ಆದಾಗಿನಿಂದ ಪ್ರಸ್ತುತದ ವರೆಗೆ ಬಹಳಷ್ಟು ಬಾರಿ ರೈಲ್ವೆ ವೇಳಾಪಟ್ಟಿ ಬದಲಾಗಿರುವುದು ಸರಿ ಅಷ್ಟೇ. ಈ ಮಾರ್ಗವಾಗಿ ತಲುಪುವ ರೈಲುಗಳ ಸಂಖ್ಯೆ ತೀರ ಕಡಿಮೆಯಾಗಿದ್ದು ಮೂರ್ನಾಲ್ಕು ದಿನವಹಿ ರೈಲುಗಳನ್ನು ಓಡಿಸುವುದರಿಂದ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ ಹಾಗೂ ರೈಲ್ವೆ ಇಲಾಖೆಗೂ ಆದಾಯ ತಂದು ಕೊಡುವ ಮೂಲವಾಗಿದೆ ಎಂಬುದನ್ನು ಮನಗಂಡು ಈ ಕೆಳಗೆ ತಿಳಿಸಿರುವ ವೇಳಾಪಟ್ಟಿಯಂತೆ ರೈಲುಗಳನ್ನು ಬಿಡಬೇಕೆಂದು ಅರಸೀಕೆರೆಯಿಂದ ಮೈಸೂರಿನವರೆಗೆ ಇರುವ ರೈಲ್ವೆ ನಿಲ್ದಾಣಗಳನ್ನು ಬಳಸಿಕೊಳ್ಳುವ ಪ್ರಯಾಣಿಕರ ಅತ್ಯಂತ ನಿವೇದನೆಯಾಗಿದೆ. ಇದು ಹಾಸನ ಜಿಲ್ಲೆಯ ಜನರ ಹಾಗೂ ಈ ಮಾರ್ಗದ ಪ್ರಯಾಣಿಕರ ಹಲವು ವರ್ಷಗಳ ಬೇಡಿಕೆಯಾಗಿದೆ.

ಅರಸೀಕೆರೆಯಿಂದ ಹಾಸನಕ್ಕೆ ಬೆಳಿಗ್ಗೆ ೮:೩೦ ಗಂಟೆ ಅಥವಾ ೯ ಗಂಟೆಗೆ ಹಾಸನ ರೈಲ್ವೆ ನಿಲ್ದಾಣಕ್ಕೆ ಬರುವಂತೆ ರೈಲು ವ್ಯವಸ್ಥೆ ಅವಶ್ಯಕವಾಗಿದೆ ಎಂದು ಈ ಭಾಗದ ಜನರ ಒತ್ತಾಸೆಯಾಗಿದೆ.

ಹಾಸನ ಮಾರ್ಗವಾಗಿ ಹೊಳೆನರಸೀಪುರಕ್ಕೆ ಮುಂಜಾನೆ ೬.೩೦ ಸಮಯಕ್ಕೆ ಒಂದು ರೈಲು ಮಾತ್ರ ಬರುತ್ತಿದೆ. ಆದರೆ ಈ ಸಮಯ ಹೊರತು ಪಡಿಸಿ ಮಧ್ಯದಲ್ಲಿ ಯಾವುದೇ ರೈಲು ಸಂಚಾರ ಇರುವುದಿಲ್ಲ. ಮಧ್ಯಾಹ್ನ ಅರಸೀಕೆರೆ ರೈಲ್ವೆ ನಿಲ್ದಾಣದ ಕಡೆಯಿಂದ ಹೊಳೆನರಸೀಪುರಕ್ಕೆ ೧ ಗಂಟೆ ೧೫ ನಿಮಿಷಕ್ಕೆ ಬರುತ್ತದೆ. ಮುಂಜಾನೆ ೬:೩೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯಿಂದ೧೫ ನಿಮಿಷದವರೆಗೆ ಯಾವ ರೈಲು ಕೂಡ ಓಡಾಡುತ್ತಿಲ್ಲ ಇದರಿಂದ ಪ್ರಯಾಣಿಕರಿಗೆ ತುಂಬಾ ಅನಾನುಕೂಲವಾಗುತ್ತಿದೆ.

ಮೈಸೂರು ಸಾಂಸ್ಕೃತಿಕ ರಾಜಧಾನಿಯಾಗಿದ್ದು ಪರಂಪರೆಯ ಐತಿಹಾಸಿಕ ಪ್ರವಾಸೋದ್ಯಮ ಸ್ಥಳಗಳು, ವಿಶ್ವವಿದ್ಯಾನಿಲಯಗಳಿದ್ದು ವಿದ್ಯಾರ್ಥಿಗಳು ಮಾನಸ ಗಂಗೋತ್ರಿಗೆ ವ್ಯಾಸಂಗ ಮಾಡಲು ತೆರಳುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಹಲವು ತರಬೇತಿ ಕೇಂದ್ರಗಳಿವೆ, ಮತ್ತು ವ್ಯಾಪಾರ ವಹಿವಾಟು ಮಾಡಲು, ಶುಭ ಕಾರ್ಯಗಳಿಗೆ, ಮನರಂಜನೆಗಳಿಗೆ, ಅತಿ ಹೆಚ್ಚು ಜನರು ಹೋಗುತ್ತಾರೆ.

ಅಷ್ಟೇ ಅಲ್ಲದೆ ಹಾಸನದಲ್ಲಿ ಬೆರಳೆಣಿಕೆಯಷ್ಟು ಕೆಲವೇ ಕೆಲವು ರೋಗಕ್ಕೆ ಸಂಬಂಧಿಸಿದ ಆಸ್ಪತ್ರೆಗಳಿವೆ. ಅನೇಕ ಕಾಯಿಲೆಗಳಿಗೆ ತಜ್ಞರು ಮತ್ತು ಗುಣಮಟ್ಟದ ಆಸ್ಪತ್ರೆಗಳು ಅಷ್ಟಾಗಿ ಇಲ್ಲದ ಕಾರಣ ಬಹುತೇಕ ಸಾರ್ವಜನಿಕರು, ರೋಗಿಗಳು, ಜಯದೇವ ಹೃದ್ರೋಗ ಆಸ್ಪತ್ರೆ, ಕೃಷ್ಣರಾಜ ಆಸ್ಪತ್ರೆ, ನಾರಾಯಣ ಹೃದ್ರೋಗ ಆಸ್ಪತ್ರೆ, ಬ್ರೈನ್ ಟ್ಯೂಮರ್ ಖಾಯಿಲೆಗೆ ಸಂಬಂಧಿಸಿದ ಟ್ರಾಮಾ ಸೆಂಟರ್, ವಾಕ್ ಮತ್ತು ಶ್ರವಣ ಸಂಸ್ಥೆ, ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದ ಭಾರತ್ ಆಸ್ಪತ್ರೆ, ಕಾಮಾಕ್ಷಿ ಆಸ್ಪತ್ರೆ, ಬೃಂದಾವನ ಆಸ್ಪತ್ರೆ , ಜೆಎಸ್‌ಎಸ್ ಆಸ್ಪತ್ರೆ, ಇನ್ನೂ ಹಲವು ಆಸ್ಪತ್ರೆಗಳಿದ್ದು ದೊಡ್ಡ ದೊಡ್ಡ ರೋಗಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಿವೆ, ಆದ್ದರಿಂದ ಅತಿ ಹೆಚ್ಚು ರೋಗಿಗಳು ಸಾರ್ವಜನಿಕರು, ಪ್ರಯಾಣಿಕರು ರೈಲುಗಳ ಮೂಲಕ ಓಡಾಡುವ ಮಾರ್ಗವಾಗಿದೆ.

ಮೈಸೂರು ಕಡೆಯಿಂದ ಹೊಳೆನರಸೀಪುರ ಹಾಸನ ಮಾರ್ಗವಾಗಿ ಅನೇಕ ರೈಲುಗಳು ಮುಂಜಾನೆ ಯಿಂದ ರಾತ್ರಿ ವರವಿಗೆ ಸಂಚರಿಸುತ್ತವೆ. ಆದರೆ ಹಾಸನದಿಂದ ಮೈಸೂರಿಗೆ ಮುಂಜಾನೆ ಬಿಟ್ಟರೆ ಮಧ್ಯಾಹ್ನದವರೆಗೆ ಯಾವುದೇ ರೈಲುಗಳ ಸಂಚಾರ ಇರುವುದಿಲ್ಲ. ಆದ್ದರಿಂದ ಈ ಮಾರ್ಗದಲ್ಲಿ ರೈಲಿನ ಅವಶ್ಯಕತೆ ಇರುವುದರಿಂದ ಇದನ್ನು ಮನಗಂಡು ರೈಲ್ವೆ ಇಲಾಖಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತುರ್ತಾಗಿ ಕ್ರಮವಹಿಸಿ ಪ್ರತಿನಿತ್ಯ ಹೊಳೆನರಸೀಪುರ ರೈಲ್ವೆ ನಿಲ್ದಾಣಕ್ಕೆ ಬೆಳಿಗ್ಗೆ ೯ ಗಂಟೆ ಅಥವಾ ೯:೩೦ ಸಮಯಕ್ಕೆ ಬರುವಂತೆ ಡೆಮೋ ರೈಲಿನ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು, ಪ್ರಯಾಣಿಕರು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular