ಬೆಂಗಳೂರು: ವಿಧಾನಮಂಡಲದ ಅಧಿವೇಶನ ಜುಲೈ 3ರಂದು ಪ್ರಾರಂಭವಾಗಲಿದ್ದು, ಆ ದಿನ ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ನಂತರ ಜುಲೈ 4ರಿಂದ ಉಭಯ ಸದನಗಳ ಅಧಿಕೃತ ಕಾರ್ಯಕಲಾಪಗಳು ಆರಂಭವಾಗಲಿದ್ದು, ಜುಲೈ 8 ಮತ್ತು 9ರಂದು ಸಾರ್ವತ್ರಿಕ ರಜಾ ದಿನಗಳು ಹೊರತುಪಡಿಸಿ ಜುಲೈ 14ರವರೆಗೆ ಅಧಿವೇಶನ ನಡೆಯಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಪ್ರಕಟಣೆ ಹೊರಡಿಸಿದ್ದಾರೆ. ಜುಲೈ 7ರಂದು ಮುಖ್ಯಮಂತ್ರಿಯವರು ಬಜೆಟ್ ಮಂಡಿಸಲಿದ್ದಾರೆ.
ಮೇಲ್ಮನೆ ಅಧಿವೇಶನಕ್ಕೆ ಪ್ರಕಟಣೆ: ಈ ಮಧ್ಯೆ ವಿಧಾನಪರಿಷತ್ತಿನ ಅಧಿವೇಶನ ಜುಲೈ 3ರಿಂದ ಸಮಾವೇಶನಗೊಳ್ಳುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಧಿಸೂಚನೆ ಹೊರಡಿಸಿದ್ದಾರೆ.
ಅದರಂತೆ, ಜಲೈ 3ರಂದು ಮಧ್ಯಾಹ್ನ 12 ಗಂಟೆಗೆ ವಿಧಾನಪರಿಷತ್ತಿನ ಕಲಾಪ ಆರಂಭವಾಗಲಿದೆ. ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರದ ಹಿನ್ನೆಲೆಯಲ್ಲಿ ಈಗಾಗಲೇ ವಿಧಾನಸಭೆ ಅಧಿವೇಶನ ಕರೆಯಲಾಗಿದ್ದು, ಆಗ ವಿಧಾನಸಭೆ ಅಧಿವೇಶನಕ್ಕೆ ಮಾತ್ರ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದರು. ಅದರ ಉಪವೇಶನ ಸಹ ಜುಲೈ 3ರಿಂದ ಆರಂಭಗೊಳ್ಳಲಿದೆ. ಹಾಗಾಗಿ, ಈಗ ವಿಧಾನಪರಿಷತ್ತಿನ ಆಧಿವೇಶನ ಸಮಾವೇಶಗೊಳ್ಳಲು ರಾಜ್ಯಪಾಲರು ಪ್ರತ್ಯೇಕ ಆಧಿಸೂಚನೆ ಹೊರಡಿಸಿದ್ದಾರೆ.