ಗುಂಡ್ಲುಪೇಟೆ: ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳು, ಗ್ರಾಮ ಪಂಚಾಯಿತಿ ಮತ್ತು ಸರ್ಕಾರಿ ಶಾಲೆಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ವೆಂಕಟೇಶ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸದಸ್ಯರೊಂದಿಗೆ ಸಭೆ ನಡೆಸಿ ಮಾತನಾಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ವೆಂಕಟೇಶ್, ಗ್ರಾಪಂಗೆ ಸರ್ಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಜೊತೆಗೆ ಪಂಚಾಯಿತಿಗೆ ಬರುವ ಆದಾಯದ ಮೂಲಗಳನ್ನು ಹೆಚ್ಚಳ ಮಾಡಿ, ಅಭಿವೃದ್ಧಿಗೆ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಆಗುತ್ತಿರುವ ಬಾಲ್ಯ ವಿವಾಹ ತಡೆಯಲು ಸ್ಥಳೀಯರ ಸಹಭಾಗಿತ್ವ ಅಗತ್ಯ. ಬಾಲ್ಯ ವಿವಾಹ ಕಾನೂನು ಬಾಹೀರವಾಗಿರುವ ಕಾರಣ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಬಾಲ್ಯ ವಿವಾಹದ ಮಾಹಿತಿಯನ್ನು ಸದಸ್ಯರು ನೀಡಬೇಕು ಎಂದು ಸೂಚಿಸಿದರು.
ಅಂಗನವಾಡಿ ಹಾಗೂ ಶಾಲೆಗೆ ಭೇಟಿ: ಸರ್ಕಾರದಿಂದ ಶಾಲೆಯ ಬಿಸಿಯೂಟ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಬರುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ನೀಡಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ಕೊಟ್ಟು, ಶೌಚಾಲಯ ಶುಚಿಯಾಗಿಟ್ಟು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಜೊತೆಗೆ ಶಾಲೆಯಲ್ಲಿ ಪಾಠ ಪ್ರವಚನಗಳನ್ನು ಸಹ ಶಿಕ್ಷಕರು ಉತ್ತಮ ರೀತಿಯಲ್ಲಿ ಮಾಡುವ ಮೂಲಕ ಒಳ್ಳೆಯ ವಿದ್ಯಾರ್ಥಿಯಾಗಿ ರೂಪುಗೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸುಧಾ, ಉಪಾಧ್ಯಕ್ಷೆ ಚಿಕ್ಕತಾಯಮ್ಮ, ಸದಸ್ಯರಾದ ಶಿವಪುರ ಮಹದೇವಪ್ಪ, ಚನ್ನಬಸವಪ್ಪ, ಮಹೇಶ್, ಶಿವನ್ಣ, ಬಿ.ಮಹೇಶ್, ಗಾಯಿತ್ರಮ್ಮ, ರತ್ನಮ್ಮ, ಮುಖ್ಯ ಶಿಕ್ಷಕರು ವೃಷಬೇಂದ್ರ, ವಿಶ್ವೇಶ್ವರಯ್ಯ, ಪಿಡಿಓ ಮಂಜುನಾಥ್ ರಾವ್, ಶಿಶು ಅಭಿವೃದ್ಧಿ ಇಲಾಖೆ ಮಹಿಳಾ ಮೇಲ್ವಿಚಾರಕಿ ಸೋನಿಯಾ ಬೇಗಂ ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ವೆಂಕಟೇಶ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.