ಮಂಗಳೂರು(ದಕ್ಷಿಣ ಕನ್ನಡ): ಪಕ್ಷವು ನಿಂತ ನೀರಾಗಬಾರದು. ಹೊಸಬರು ಬರುತ್ತಾ ಇರಬೇಕು. ಚಲಾವಣೆ ಆಗುತ್ತಾ ಇರಬೇಕು. ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ತಿಳಿಸಿದರು.
ಮಂಗಳೂರಿನ ಪಾಂಡೇಶ್ವರದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಸಂಸದ ನಳೀನ್, ಯಾರೇ ಅಭ್ಯರ್ಥಿಯಾದರೂ ನರೇಂದ್ರ ಮೋದಿ ಪ್ರಧಾನಿಯಾಗಬೇಕು, ಬಿಜೆಪಿ ಮತ್ತೆ ಗೆಲ್ಲಬೇಕು ಎಂಬುದು ನಮ್ಮ ಗುರಿ ಎಂದು ಹೇಳಿದರು.
ಇನ್ನು ನಾವು ಪಕ್ಷ ಏನೇ ಹೇಳಿದರೂ ಮಾಡುತ್ತೇವೆ. ಪಕ್ಷದವರು ನಮ್ಮ ಬಳಿ ಗುಡಿಸು ಅಂದರೆ ಗುಡಿಸುತ್ತೇವೆ. ಒರೆಸು ಅಂದರೆ ಒರೆಸುತ್ತೇವೆ. ನಮಗೆ ಅಧಿಕಾರವೇ ಪ್ರಾಮುಖ್ಯ ಅಲ್ಲ. ಏನು ಬದಲಾವಣೆ ಮಾಡಬೇಕೋ ಅದನ್ನು ರಾಷ್ಟ್ರೀಯ ನಾಯಕರು ಮಾಡುತ್ತಾರೆ ಎಂದಿದ್ದಾರೆ.