Monday, January 19, 2026
Google search engine

Homeರಾಜ್ಯಸಾಂಕೇತಿಕ ಆಚರಣೆಗಳಿಗಿಂತ ಬೌದ್ಧ ತತ್ವಗಳನ್ನು ಅಳವಡಿಸಿಕೊಳ್ಳಿ : ಅಹಿಂಸಾ ಚೇತನ್‌ ಕರೆ

ಸಾಂಕೇತಿಕ ಆಚರಣೆಗಳಿಗಿಂತ ಬೌದ್ಧ ತತ್ವಗಳನ್ನು ಅಳವಡಿಸಿಕೊಳ್ಳಿ : ಅಹಿಂಸಾ ಚೇತನ್‌ ಕರೆ

ಮೈಸೂರು : ಸಾಂಕೇತಿಕ ಆಚರಣೆಗಳಿಂದ ಹೊರಬಂದು ಬೌದ್ಧ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಎಂದು ಅಹಿಂಸಾ ಚೇತನ್ ಕರೆ ನೀಡಿದರು. ಈ ಬಗ್ಗೆ ನಗರದ ರವಾಗೋವಿಂದ ರಂಗಮಂದಿರದಲ್ಲಿ ನಡೆದ ಸುಗ್ಗಿ ಸಂಭ್ರಮ ಸಾಂಸ್ಕೃತಿಕ ಸಮಾವೇಶದಲ್ಲಿ ಮಾತನಾಡಿದರು.

ಅಂತರರಾಷ್ಟ್ರೀಯ ಮಾನವ ಏಳಿಗೆ ಮತ್ತು ಅಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿ, ಗೌತಮ ಬುದ್ಧ ಮಾನವ ಇತಿಹಾಸದ ಅತ್ಯಂತ ಶ್ರೇಷ್ಠ ವ್ಯಕ್ತಿ. ಅವರಿಗೆ ಗೌರವ ಸಲ್ಲಿಸುವುದು ಎಂದರೆ ಕೇವಲ ದೀಪ ಹಚ್ಚುವುದು ಅಥವಾ ಹೂವು ಅರ್ಪಿಸುವುದಲ್ಲ, ಬದಲಾಗಿ ಅವರ ಮೂಲ ಮೌಲ್ಯಗಳನ್ನು ಪಾಲಿಸುವುದಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಮುಂದುವರೆದು, ಡಾ. ಬಿ.ಆರ್.ಅಂಬೇಡ್ಕರ್ ಅವರ ಪರಂಪರೆಯು ಕೇವಲ ಸಂವಿಧಾನ ಶಿಲ್ಪಿ ಎಂಬ ಹಣೆಪಟ್ಟಿಗೆ ಸೀಮಿತವಾಗಿಲ್ಲ ಎಂದು ಒತ್ತಿ ಹೇಳಿದ ಅವರು, ಅಂಬೇಡ್ಕರ್ ಅವರ ಅತ್ಯಂತ ದೊಡ್ಡ ಸಾಧನೆ ಎಂದರೆ ಬೌದ್ಧ ಧರ್ಮದ ಆಧುನಿಕ ವ್ಯಾಖ್ಯಾನವಾದ ನವಯಾನದ ಸೃಷ್ಟಿ. ಈ ಚಳವಳಿಯು ಕೇವಲ ಧಾರ್ಮಿಕ ಮತಾಂತರವಾಗಿರಲಿಲ್ಲ, ಬದಲಾಗಿ ಬುದ್ಧನ ವೈಚಾರಿಕತೆಯಿಂದ ಪ್ರೇರಿತವಾದ ಒಂದು ಸಮಕಾಲೀನ ಧರ್ಮದ ಸ್ಥಾಪನೆಯಾಗಿತ್ತು ಎಂದಿದ್ದಾರೆ.

ಇನ್ನೂ ಬುದ್ಧ, ಕಬೀರ್ ಮತ್ತು ಜ್ಯೋತಿಬಾ ಫುಲೆ ಅವರ ಬೋಧನೆಗಳಿಂದ ಪ್ರಭಾವಿತರಾಗಿದ್ದ ಅಂಬೇಡ್ಕರ್ ಅವರು, ತೀವ್ರ ಸೈದ್ಧಾಂತಿಕ ವಿರೋಧಗಳ ನಡುವೆಯೂ ಸಮಾನತೆಯ ಅಡಿಪಾಯವನ್ನು ನಿರ್ಮಿಸಿದರು ಎಂದು ಈ ವೇಳೆ ಸ್ಮರಿಸಿದ್ದಾರೆ.

ಬಳಿಕ ಇದೇ ಸಂದರ್ಭದಲ್ಲಿ ವಿಚಾರವಾದಿ ಪ್ರಸನ್ನ ಅವರು ಮಾತನಾಡಿ, ಜಾತಿ ವ್ಯವಸ್ಥೆಯ ಶ್ರೇಣೀಕರಣವನ್ನು ಪ್ರಶ್ನಿಸುವಲ್ಲಿ ಅಂಬೇಡ್ಕರ್ ಮತ್ತು ನಿರಂಜನ್ ಅವರ ಕ್ರಾಂತಿಕಾರಿ ಪಾತ್ರಗಳ ಬಗ್ಗೆ ಚರ್ಚಿಸಿದರು. ಹಾಗೂ ಶಿಕ್ಷಣವು ಇಂದು ಅನೇಕ ಸಮುದಾಯಗಳನ್ನು ಸಬಲೀಕರಣಗೊಳಿಸಿದ್ದರೂ ಸಹ, ಆಂತರಿಕ ಪ್ರತ್ಯೇಕತೆ ಮತ್ತು ಶ್ರೇಷ್ಠತೆಯ ವ್ಯಸನವನ್ನು ಒಳಗೊಂಡ ಬ್ರಾಹ್ಮಣ್ಯದ ಮನಸ್ಥಿತಿ ಇಂದಿಗೂ ಅನೇಕ ಜಾತಿಗಳಲ್ಲಿ ಜೀವಂತವಾಗಿದೆ ಎಂದು ಅವರು ಎಚ್ಚರಿಸಿದರು. ಅಲ್ಲದೆ ಜಾತಿ ವಿನಾಶ ಎಂಬ ಅಂಬೇಡ್ಕರ್ ಅವರ ಮೂಲ ಆಶಯದತ್ತ ನಾವು ಮತ್ತೆ ಗಮನ ಹರಿಸಬೇಕೆಂದು ಅವರು ಆಗ್ರಹಿಸಿದರು.

ಈ ವೇಳೆ ಮುಳ್ಳೂರಿನ ವಿನಾಯಕ ಜ್ಞಾನ ವಿದ್ಯಾ ಶಾಲೆಯ ವಿದ್ಯಾರ್ಥಿಗಳು ಅಂಬೇಡ್ಕರ್ ಕಂಡ ಬುದ್ಧ ಎಂಬ 20 ನಿಮಿಷದ ಅರ್ಥಪೂರ್ಣ ನಾಟಕವನ್ನು ಪ್ರದರ್ಶಿಸಿದರು. ಈ ಪ್ರದರ್ಶನ ಮತ್ತು ಬಸವಣ್ಣನವರ ವಚನಗಳಿಗೆ ನೃತ್ಯ ರೂಪಕವು ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಸಾಮಾಜಿಕ ಸುಧಾರಣೆ ಮತ್ತು ಆಧ್ಯಾತ್ಮಿಕ ಜಾಗೃತಿಯ ಸಂದೇಶವನ್ನು ಸಾರಲಾಯಿತು.

ಈ ಸಂದರ್ಭದಲ್ಲಿ ಡಾ. ಅಮರ್ ಕುಮಾರ್, ಅಶೋಕ್ ಕುಮಾರ್, ಬಿ.ಆರ್. ಮಂಜುನಾಥ್, ಅಂಜಲಿ, ಡಾ.ಅಗ್ನಿಕಾ ಹಾಗೂ ಜಯರಾಮ್ ಅವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular