ಹೊಸದಿಲ್ಲಿ: ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ಅಫಿಡವಿಟ್‌ಗಳನ್ನು ಸಲ್ಲಿಸದೇ ಇರುವುದಕ್ಕಾಗಿ ಇಂದು ಸುಪ್ರೀಂ ಕೋರ್ಟ್ ಇಂದು ಪತಂಜಲಿ ಆಯುರ್ವೇದ ಸಂಸ್ಥೆಯ ಸಹಸ್ಥಾಪಕರಾಗಿರುವ ಯೋಗ ಗುರು ರಾಮದೇವ್ ಹಾಗೂ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಸುಪ್ರೀಂ ಕೋರ್ಟ್ ಮಾತ್ರವಲ್ಲ, ಈ ದೇಶದಾದ್ಯಂತ ಇರುವ ಪ್ರತಿಯೊಂದು ಕೋರ್ಟಿನ ಆದೇಶ ಪಾಲಿಸಬೇಕು. ನೀವು ಪಾಲಿಸಿಲ್ಲ, ಎಂದು ಸುಪ್ರೀಂ ಕೋರ್ಟ್ ಹೇಳಿತಲ್ಲದೆ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಬಾಬಾ ರಾಮದೇವ್ ಅವರಿಗೆ ಹೇಳಿತು.ಕಳೆದ ತಿಂಗಳು ಪತಂಜಲಿಯು ಸುಪ್ರೀಂ ಕೋರ್ಟ್ ತರಾಟೆಯ ನಂತರ ಸಲ್ಲಿಸಿದ್ದ ಕ್ಷಮೆಯನ್ನು ಸ್ವೀಕರಿಸಲು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠ ನಿರಾಕರಿಸಿದೆ. ಒಂದು ವಾರದೊಳಗೆ ಅಫಿಡವಿಟ್ ಸಲ್ಲಿಸಲು ನ್ಯಾಯಾಲಯ ರಾಮದೇವ್ ಹಾಗೂ ಬಾಲಕೃಷ್ಣ ಅವರಿಗೆ ಕೊನೆಯ ಅವಕಾಶ ನೀಡಿತು. ಮುಂದಿನ ವಿಚಾರಣಾ ದಿನಾಂಕವಾದ ಎಪ್ರಿಲ್ ೧೦ರಂದು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಇಬ್ಬರಿಗೂ ಸೂಚಿಸಿದೆ.ದಾರಿತಪ್ಪಿಸುತ್ತಿವೆ ಎಂದು ಆರೋಪಿಸಲಾದ ಜಾಹೀರಾತುಗಳ ಪ್ರಸಾರವನ್ನು ನಿಲ್ಲಿಸುವಂತೆ ಪತಂಜಲಿ ಸಂಸ್ಥೆಗೆ ಫೆಬ್ರವರಿ ೨೭ರಂದು ನ್ಯಾಯಾಲಯ ಆದೇಶಿಸಿತ್ತು.