ರಾಮನಗರ: ವಿದ್ಯಾರ್ಥಿಗಳು ಎಂ.ಎ, ಎಂ.ಎಸ್ಸಿಯoತಹ ಉನ್ನತ ವ್ಯಾಸಂಗ ಮಾಡುವುದು ಮಾತ್ರವಲ್ಲದೇ ಐ.ಎ.ಎಸ್, ಕೆ.ಎ.ಎಸ್ ಪರೀಕ್ಷೆಗಳನ್ನು ಪಾಸು ಮಾಡುವ ಗುರಿಯನ್ನು ಹೊಂದಬೇಕು ಎಂದು ರಾಮನಗರ ವಿಧಾನಸಭಾ ಶಾಸಕರಾದ ಇಕ್ಬಾಲ್ ಹುಸೇನ್ ಅವರು ತಿಳಿಸಿದರು.
ಬೆಂ.ವಿ.ವಿ ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ ಏರ್ಪಡಿಸಿದ್ದ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.
ಭೂಮಿಯ ಮೇಲೆ ಹುಟ್ಟಿದ ಕೋಟ್ಯಾನು ಜನರಲ್ಲಿ ಕೆಲವರು ಮಾತ್ರವೇ ಇತಿಹಾಸಕ್ಕೆ ಸೇರುತ್ತಾರೆ. ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ವೈವಿಧ್ಯತೆಯ ಭಾರತಕ್ಕೆ ಸಮಾನತೆಯನ್ನು ನೀಡುವ ಉದ್ದೇಶದಿಂದ ನೀಡಿದ ಸಂವಿಧಾನದ ಮೂಲಕ ಜನಮಾನ್ಯತೆ ಪಡೆಯುವುದಲ್ಲದೇ ಇತಿಹಾಸದ ಪುಟಕ್ಕೆ ಶಾಶ್ವತವಾಗಿ ಸೇರ್ಪಡೆಯಾಗಿದ್ದಾರೆ ಎಂದರು. ರಾಮನಗರ ಸ್ನಾತಕೋತ್ತರ ಕೇಂದ್ರವು ವಿಶ್ವವಿದ್ಯಾಲಯ (ಪೂರ್ಣ ಪ್ರಮಾಣದಲ್ಲಿ) ಆಗುವ ನಿಟ್ಟಿನಲ್ಲಿ ತಾವು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಡಾ. ಬಂಜಗೆರೆ ಜಯಪ್ರಕಾಶ್ ಅವರು ಅಂಬೇಡ್ಕರ್ ಅವರ ಭೌದ್ಧ ಧರ್ಮದ ನಡೆಯನ್ನು ಸಮಗ್ರವಾಗಿ ಚಿಂತಿಸಿ ಸ್ವೀಕರಿಸಿದ ಪರಿಯನ್ನು ತಿಳಿಸಿದರು. ವಿದ್ಯಾರ್ಥಿಗಳು ಸಮಗ್ರತೆ ಮತ್ತು ವೈಚಾರಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಎಂದರು. ಬುದ್ಧ ದುಃಖಿತ ಸಮಾಜದ ಮಾರ್ಗದಾತರಾದರೆ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ ಅವರು ಬುದ್ಧಮಾರ್ಗ ಅನುಸರಿಸುವುದಲ್ಲದೇ ಸಂವಿಧಾನ ರಚಿಸುವ ಮೂಲಕ ಭಾರತೀಯ ಸಮಾಜಕ್ಕೆ ಸಮಾನತೆಯ ಮಾರ್ಗದರ್ಶಕರಾಗಿದ್ದಾರೆ ಎಂದು ತಿಳಿಸಿದರು. ದೇಹ, ಮಾತು ಮತ್ತು ಮನಸ್ಸು ತ್ರಿಕರಣ ಶುದ್ಧಿಯ ಮಾರ್ಗಗಳು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಕೆ.ಎ.ಎಸ್. ಅಧಿಕಾರಿ ಶೇಖ್ ಲತೀಫ್ ಅವರು ಸಮಾಜದ ಎಲ್ಲಾ ವರ್ಗದ ಜನ ಸಮುದಾಯ ಉನ್ನತ ಶಿಕ್ಷಣ ಪಡೆಯಲು ಮತ್ತು ನನ್ನಂತಹವರು ಆಡಳಿತಾಧಿಕಾರಿಯ ಹುದ್ದೆಯನ್ನು ಪಡೆಯಲು ಸಾಧ್ಯವಾಗಿರುವುದು ಸಂವಿಧಾನದಿoದ ಎಂಬುದನ್ನು ನಾವು ಸ್ಮರಿಸಲೇ ಬೇಕು ಎಂದ ಅವರು ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕ್ರೀಡಾಭ್ಯಾಸದಕಡೆ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದರು.
ಸಮಾರoಭದಲ್ಲಿ ವಿಶ್ವವಿದ್ಯಾಲಯದ ವಿಶೇಷ ಘಟಕಾಧಿಕಾರಿ ಡಾ. ಪಿ.ಸಿ.ನಾಗೇಶ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಕೆ. ರಾಮಕೃಷ್ಣಯ್ಯ, ರಾಮನಗರದ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶಿವನಂಕಾರಿಗೌಡ ಅವರು ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಡಾ. ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮುತ್ತುರಾಜ್ ಸ್ವಾಗತಿಸಿದರು. ಡಾ. ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರಶಸ್ತಿ ಪ್ರಧಾನ ಮಾಡಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.
