ಪಿರಿಯಾಪಟ್ಟಣ: ಸರ್ಕಾರಿ ಶಾಲಾ ಮೈದಾನವನ್ನು ಗುತ್ತಿಗೆ ಆಧಾರದ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘಕ್ಕೆ ನೀಡಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿರುವ ತಹಶೀಲ್ದಾರ್ ರವರ ಕ್ರಮವನ್ನು ಬಿಜೆಪಿ ಪಕ್ಷದ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ವಕೀಲ ಎನ್.ಎಸ್ ಲೋಕೇಶ್ ಖಂಡಿಸಿದರು.
ಪಟ್ಟಣದ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪಟ್ಟಣದ ಪೇಟೆ ಸರ್ಕಾರಿ ಶಾಲೆಗೆ ಸೇರಿದ ಖಾಲಿ ನಿವೇಶನವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದವರು ಅಕ್ರಮವಾಗಿ ಖಾತೆ ಮಾಡಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ ಫಲವಾಗಿ ಪ್ರಸ್ತಾಪ ತಿರಸ್ಕಾರವಾಗಿತ್ತು, ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸರ್ಕಾರಿ ನೌಕರರಾಗಿದ್ದುಕೊಂಡು ಮಕ್ಕಳು ಆಟ ಆಡುವ ಸರ್ಕಾರಿ ಜಾಗವನ್ನು ಪಡೆಯುವುದಕ್ಕೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಹಕಾರ ಇಲಾಖೆಯ ನಿಬಂಧಕರಿಂದ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡು ಮತ್ತೆ ಕಟ್ಟಡ ಕಟ್ಟಲು ಪ್ರಯತ್ನಿಸುತ್ತಿದ್ದಾರೆ ಆದರೆ ಖಾಸಗಿ ಸಂಘ ಸಂಸ್ಥೆಗಳಿಗೆ ಸರ್ಕಾರಿ ಜಾಗ ಮಂಜೂರು ಮಾಡಲು ಸಾಧ್ಯವಿಲ್ಲ ಎಂಬ ಆದೇಶದಿಂದಾಗಿ ಅನ್ಯಮಾರ್ಗವಿಲ್ಲದೆ ಮತ್ತೆ ಪ್ರಸ್ತಾವನೆಯನ್ನು ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಿರುವುದು ನಮ್ಮ ಗಮನಕ್ಕೆ ಬಂದಿದೆ
. ತಮ್ಮದಲ್ಲದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಸುಳ್ಳು ಖಾತೆ ಸೃಷ್ಟಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಸುಮಾರು 4 ಲಕ್ಷ ಅಧಿಕ ಹಣವನ್ನು ಖರ್ಚು ಮಾಡಿರುವುದಾಗಿ ಸರ್ವ ಸದಸ್ಯರ ಸಭೆಯಲ್ಲಿ ಲಿಖಿತವಾಗಿ ತಿಳಿಸಿರುತ್ತಾರೆ, ಯಾವುದೇ ವ್ಯಕ್ತಿ ಅಥವಾ ಸಮೂಹ ಸರ್ಕಾರಿ ಜಾಗ ಅಕ್ರಮವಾಗಿ ಪಡೆಯಲು ಪ್ರಯತ್ನಿಸಿದರೆ ಒಂದು ವರ್ಷ ಸಜೆ ಹಾಗೂ 5 ಸಾವಿರ ರೂ ದಂಡ ಎಂಬುದಾಗಿ ಇದ್ದರು ತಹಶೀಲ್ದಾರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಹಕಾರ ಇಲಾಖೆಯ ನಿಬಂಧಕರು ಈ ಬಗ್ಗೆ ಕ್ರಮ ವಹಿಸದೆ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ರಕ್ಷಣೆ ಮಾಡುತ್ತಿರುವುದು ವಿಷಾದನೀಯ ಮತ್ತು ಖಂಡನಾರ್ಹ ಕ್ರಮವಾಗಿದೆ, ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕೂಡಲೇ ಕಟ್ಟಡ ತೆರವುಗೊಳಿಸಲು ಕ್ರಮವಹಿಸದಿದಲ್ಲಿ ತಹಶಿಲ್ದಾರ್ ಕಚೇರಿ ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಈರಾಜ್ ಬಹುಜನ್, ದೇವೇಂದ್ರ ಕುಮಾರ್, ಕಾರ್ತಿಕ್ ಕುಮಾರ್, ಮಹದೇವ್ ಇದ್ದರು.