ಬೆಂಗಳೂರು: ಮುಡಾದಲ್ಲಿ ಬದಲಿ ನಿವೇಶನ ಹಂಚಿಕೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು, ಅಕ್ರಮ ನಡೆಸಿದ ಆರೋಪದಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿ ರಾಜ್ಯಪಾಲರಿಗೆ ವಕೀಲ ಟಿ.ಜೆ.ಅಬ್ರಹಾಂ ಮನವಿ ಸಲ್ಲಿಸಿದ್ದಾರೆ.
ಬದಲಿ ನಿವೇಶನ ಹಂಚಿಕೆ ಸಂಬಂಧ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರಲ್ಲಿ ಅಬ್ರಹಾಂ ಅವರು ಇದೇ 18ರಂದು ದೂರು ದಾಖಲಿಸಿದ್ದರು. ಆದರೆ ಮುಖ್ಯಮಂತ್ರಿಯವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮತಿ ಅಗತ್ಯವಿದೆ.
ಅಬ್ರಹಾಂ ಅವರು 22 ಪುಟಗಳ ವಿಸ್ತೃತ ಮನವಿ ಪತ್ರವನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಶುಕ್ರವಾರ ಸಲ್ಲಿಸಿದ್ದಾರೆ. ‘ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮ ನಡೆಸಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ₹55.80 ಕೋಟಿ ನಷ್ಟವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಅಗತ್ಯವಿದೆ’ ಎಂದು ವಿವರಿಸಿದ್ದಾರೆ.
‘ಡಿ–ನೋಟಿಫಿಕೇಷನ್ ಮಾಡಲಾದ ಕೆಸರೆ ಗ್ರಾಮದ 3 ಎಕರೆ 16 ಗುಂಟೆ ಜಮೀನನ್ನು ವಂಚನೆ ಮೂಲಕ ಕಬಳಿಸಲಾಗಿದೆ. ತಮ್ಮ ಹೆಸರಿನಲ್ಲಿ ಇಲ್ಲದೇ ಇದ್ದ ಮತ್ತು ತಾವು ಯಾವ ರೀತಿಯಲ್ಲೂ ಹಕ್ಕು ಹೊಂದಿಲ್ಲದ ಈ ಜಮೀನನ್ನು ಜೆ.ದೇವರಾಜ ಅವರು ಮಾರಾಟ ಮಾಡಿದ್ದಾರೆ. ಅದನ್ನು ಸಿದ್ದರಾಮಯ್ಯ ಅವರ ಮೌಖಿಕ ಸೂಚನೆಯ ಆಧಾರದ ಮೇಲೆ, ಅವರ ಬಾಮೈದುನ ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.