Friday, April 18, 2025
Google search engine

HomeರಾಜಕೀಯYST ಆರೋಪದ ನಂತರ ಕಾಂಗ್ರೆಸ್ ಸರಕಾರದ ವಿರುದ್ಧ ಇನ್ನೊಂದು ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿ

YST ಆರೋಪದ ನಂತರ ಕಾಂಗ್ರೆಸ್ ಸರಕಾರದ ವಿರುದ್ಧ ಇನ್ನೊಂದು ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ವೈಎಸ್ಟಿ ತೆರಿಗೆ ಶುರುವಾಗಿದೆ ಎಂದು ನೇರ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಸರಕಾರದ ಮೇಲೆ ವರ್ಗಾವಣೆ ಸಿಂಡಿಕೇಟ್ ಕುರಿತಾದ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ವರ್ಗಾವಣೆ ದಂಧೆ ಹಾಗೂ ಭ್ರಷ್ಟಾಚಾರ ಇಲಾಖಾವಾರು ದೊಡ್ಡ ಪ್ರಮಾಣದಲ್ಲಿ  ವಿಸ್ತರಣೆ ಆಗುತ್ತಿದೆ. ಸಾರಿಗೆ ಹಾಗೂ ಕಂದಾಯ ಇಲಾಖೆಗಳ (ಸಬ್ ರಿಜಿಸ್ಟ್ರಾರ್) ನಂತರ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಸಲು ಸಿಂಡಿಕೇಟ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ ಅವರು ನೇರವಾಗಿ ದೂರಿದರು.

ರಾಜ್ಯಪಾಲರ ಭಾಷಣದಲ್ಲಿ ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡುವುದಾಗಿ ಹೇಳಿಸಿದ ಈ ಸರಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್ ಅವ್ಯಾಹತವಾಗಿ ನಡೆಯುತ್ತಿದೆ. ಪ್ರತಿ ಹುದ್ದೆಗೂ ದರ ನಿಗದಿ ಮಾಡಲಾಗಿದೆ. ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಿಂಡಿಕೇಟ್ ಸಿದ್ಧ ಮಾಡಿಕೊಟ್ಟಿರುವ ಪಟ್ಟಿಯ ಕಡತ ಇಲಾಖೆಯ ಆಯುಕ್ತರ ಮುಂದೆ ಸಹಿಗಾಗಿ ಕಾಯುತ್ತಾ ಬಿದ್ದಿದೆ. ಅವರು ಸಹಿ ಹಾಕುತ್ತಾರೋ ಅಥವಾ ಏನು ಮಾಡುತ್ತಾರೋ ಕಾದು ನೋಡಬೇಕಿದೆ ಎಂದರು ಮಾಜಿ ಮುಖ್ಯಮಂತ್ರಿಗಳು.

30 ಲಕ್ಷ ತನ್ನಿ ಅನ್ನುತ್ತಾರೆ!!:

ಕಾಸಿಲ್ಲದೆ ಪೋಸ್ಟ್ ಇಲ್ಲ ಎನ್ನುವುದನ್ನು ಈ ಸರಕಾರ ನೀತಿಯನ್ನಾಗಿ ಮಾಡಿಕೊಂಡಿದೆ. ಸದಾ ಮುಖ್ಯಮಂತ್ರಿ ಹಿಂದೆಮುಂದೆ ಹಾಗೂ ಸಿಎಂ ಕಚೇರಿ ಸುತ್ತಾಮುತ್ತಾ ಸದಾ ಓಡಾಡಿಕೊಂಡಿರುವ ಶಾಸಕರೊಬ್ಬರು ಮುಖ್ಯಮಂತ್ರಿಗೆ ಪತ್ರ ಕೊಟ್ಟರೆ, ಬರೀ ಪತ್ರ ಬೇಡ. 30 ಲಕ್ಷ ರೂ. ಕೊಡಬೇಕು ಎಂದು ಹೇಳ್ತಾರಂತೆ ಸಿಎಂ ಕಚೇರಿಯಲ್ಲಿ ಇರುವ ಮಹಾಶಯರು. ಇದು ಈ ಸರಕಾರದ ಹಣೆಬರಹ ಎಂದು ಕುಮಾರಸ್ವಾಮಿ ಅವರು ಪ್ರಹಾರ ನಡೆಸಿದರು.

ಸಾಕ್ಷಿ ಇಡೀ ಅಂತಾರೆ. ದುಡ್ಡು ಕೊಟ್ಟೋನು ಸಾಕ್ಷಿ ಇಡ್ತಾನ? ಅವನಿಗೆ ಕೆಲಸ ಆದರೆ ಸಾಕು. ಇವರು ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹೆಚ್ ಡಿಕೆ ಅವರು ವಾಗ್ದಾಳಿ ನಡೆಸಿದರು.

ನಾನು ಏನೇ ಮಾತಾಡಿದರೂ ವಿಷಯ ಇದ್ದರೆ ಮಾತ್ರ ಮಾತನಾಡುತ್ತೇನೆ, ಇಲ್ಲವಾದರೆ ಮೌನವಾಗಿ ಇರುತ್ತೇನೆ. ರಾಜ್ಯಪಾಲರ ಭಾಷಣದಲ್ಲಿ ವೀರಾವೇಶ ತೋರುವ ಇವರು, ಅಧಿಕಾರಕ್ಕೆ ಒಂದು ತಿಂಗಳ ಮೇಲಾಯಿತು. ಇದುವರೆಗೆ ಲಂಚಾವತಾರದ ಈ ಸರಕಾರ ಏನು ಕ್ರಮ ಕೈಗೊಂಡಿದೆ. ಜನರಿಗೆ ಹೇಳಬೇಕಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು ಮಾಜಿ ಮುಖ್ಯಮಂತ್ರಿಗಳು.

ದಾಖಲೆ ಇದ್ದರೆ ಕೊಡಲಿ ಎಂದು ಕೆಲವರು ಹೇಳಿದ್ದನ್ನು ಕೇಳಿದ್ದೇನೆ. ದಾಖಲೆ ಕೊಡಿ ಎಂದವರೇ ಹಿಂದೆ ಬಿಜೆಪಿ ಸರಕಾರದ ವಿರುದ್ಧ 40% ಕಮಿಷನ್ ಆರೋಪ ಸೇರಿದಂತೆ ಅನೇಕ ಆರೋಪಗಳನ್ನು ಮಾಡಿದ್ದರು. ಅವರು ಆಗ ದಾಖಲೆ ಇಟ್ಟಿದ್ದರಾ? ಈಗ ಅವರದೇ ಸರಕಾರ ಇದೆ, ದಾಖಲೆ ಬಿಡುಗಡೆ ಮಾಡಬಹುದು, ಅಲ್ಲವೇ? ಎಂದು ಅವರು  ತೀಕ್ಷ್ಣವಾಗಿ ಪ್ರಶ್ನಿಸಿದರು.

ಚುನಾವಣೆಗೆ ಭ್ರಷ್ಟಾಚಾರದ ಬಗ್ಗೆ ವೀರಾವೇಶದಿಂದ ಜನರ ಮುಂದೆ ಮಾತನಾಡಿದರು. ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಕೊಚ್ಚಿಕೊಂಡರು. ಆ ವೀರಾವೇಶ ಈಗ ಎಲ್ಲಿ ಹೋಯಿತು ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.

RELATED ARTICLES
- Advertisment -
Google search engine

Most Popular