ಹುಬ್ಬಳ್ಳಿ: ವಿನಾಕಾರಣ ಒಬ್ಬರ ತೇಜೋವಧೆ ಮಾಡುವುದು ಸರಿಯಲ್ಲ ಪ್ರಕರಣ ದಾಖಲಾದ ಕೂಡಲೇ ದೋಷಿ, ನಿರ್ದೋಷಿ ಎಂದು ಹೇಳುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ದಾಖಲಾಗಿರುವ ಪೋಕ್ಸೋ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣದ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ಸರಿಯಾಗಿ ತನಿಖೆಯಾಗಬೇಕು. ವಿನಾಕಾರಣ ಯಾರನ್ನೂ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ೨೦ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ಖಚಿತ. ಇದೀಗ ಸಿಎಎ ತೆಗೆದುಕೊಂಡು ಬಂದಿದ್ದಾರೆ. ಕಳೆದ ೧೦ ವರ್ಷದಲ್ಲಿ ಇವರ ಅಭಿವೃದ್ಧಿ ಶೂನ್ಯ. ಹೀಗಾಗಿಯೇ ಚುನಾವಣೆ ಸಂದರ್ಭದಲ್ಲಿ ಇಂತಹ ವಿಷಯಗಳನ್ನು ತಂದು ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಕೆಲಸ ಬಿಜೆಪಿ ನಾಯಕರು ಮಾಡುತ್ತಿದ್ದಾರೆಂದು ಕಿಡಿಕಾರಿದರು.