ಹೊಸದಿಲ್ಲಿ : ಕೃತಕ ಬುದ್ಧಿಮತ್ತೆ (AI) ಎಲ್ಲರಿಗೂ ಮುಕ್ತವಾಗಿರಬೇಕು, ಎಲ್ಲರನ್ನೂ ಒಳಗೊಳ್ಳುವಂತಿರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದಿಲ್ಲಿಯಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾರತದ ‘ಮಾನವ್ ವಿಷನ್’ ನ್ನು ಅನಾವರಣಗೊಳಿಸಿ, ಬಳಿಕ ಜಾಗತಿಕ ನಾಯಕರು ಹಾಗೂ ಪ್ರಮುಖ ಕಂಪೆನಿಗಳ ಸಿಇಒಗಳ ಸಮ್ಮುಖದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಎಐ ಕ್ರಾಂತಿಯ ಭಾಗವಾಗಿರುವುದಷ್ಟೇ ಅಲ್ಲ, ಅದರ ನಾಯಕತ್ವ ವಹಿಸಿ ಮುನ್ನಡೆಸುತ್ತಿದೆ ಎಂದು ಹೇಳಿದರು.
ಮುಂದುವರೆದು, ಮಾನವರು ಕೇವಲ ಡೇಟಾ ಪಾಯಿಂಟ್ ಅಥವಾ ಕಚ್ಚಾ ವಸ್ತುವಾಗದಂತೆ ನೋಡಿಕೊಳ್ಳಲು, ಎಐಯನ್ನು ಪ್ರಜಾಸತ್ತಾತ್ಮಕಗೊಳಿಸಬೇಕು. ಇದು ಒಳಗೊಳ್ಳುವಿಕೆ ಮತ್ತು ಸಬಲೀಕರಣದ ಮಾಧ್ಯಮವಾಗಬೇಕು. ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪೂರಕವಾಗಿರಬೇಕು ಎಂದು ತಿಳಿಸಿದರು.
ಇನ್ನೂ ಈ ವೇಳೆ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಬ್ರೆಝಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸನಾಯಕ, ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್ಗೇ, ಮಾರಿಷಸ್ ಪ್ರಧಾನಿ ನವೀನ್ ಚಂದ್ರ ರಾಮ್ಗೂಲಂ, ಕ್ರೊಯೇಷಿಯಾ ಪ್ರಧಾನಿ ಆಂಡ್ರೆಜ್ ಪ್ಲೆಂಕೊವಿಚ್, ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್, ಫಿನ್ಲೆಂಡ್ ಪ್ರಧಾನಿ ಪೆಟ್ಟೇರಿ ಒರ್ಪೋ ಸಹಿತ ಹಲವು ಗಣ್ಯರು ಭಾಗವಹಿಸಿದ್ದಾರೆ.



