ಬೆಂಗಳೂರು: ೨೦೨೪-೨೫ನೇ ಸಾಲಿಗೆ ೩೫.೧೦ ಲಕ್ಷ ರೈತರಿಗೆ ರೂ ೨೫,೦೦೦ ಕೋಟಿಗಳ ಅಲ್ಪಾವಧಿ ಕೃಷಿ ಸಾಲ ಮತ್ತು ೦.೯೦ ಲಕ್ಷ ರೈತರಿಗೆ ರೂ. ೨,೦೦೦.೦೦ ಕೋಟಿಗಳ ಮಧ್ಯಮಾವಧಿ ಹಾಗೂ ಧೀರ್ಘಾವಧಿ ಕೃಷಿ ಸಾಲ ವಿತರಿಸುವ ಗುರಿ ನಿಗದಿಪಡಿಸಿದ್ದು, ರೂ. ೨೫೬೬.೦೨ ಕೋಟಿಗಳ ಹೆಚ್ಚಿನ ಕೃಷಿ ಸಾಲ ವಿತರಿಸಲಾಗುವುದು ಎಂದು ಸಹಾಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಾಥಮಿಕ ಪತ್ತಿನ ಸಹಕಾರ ಸಂಘ / ಡಿ.ಸಿ.ಸಿ ಬ್ಯಾಂಕುಗಳ ಮೂಲಕ ೨೦೨೩-೨೪ನೇ ಸಾಲಿನಲ್ಲಿ ೨೯,೨೬,೯೧೦ ರೈತರಿಗೆ ರೂ. ೨೨,೯೮೨.೧೦ ಕೋಟಿಗಳ ಬೆಳೆ ಸಾಲ ವಿತರಿಸಲಾಗಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ / ಡಿ.ಸಿ.ಸಿ ಬ್ಯಾಂಕುಗಳ ಮೂಲಕ ೨೦೨೪ನೇ ಜುಲೈ ೬ ರ ವರೆಗೆ ೭,೮೦,೩೬೩ ರೈತರಿಗೆ ರೂ. ೬೭೯೯.೧೭ ಕೋಟಿಗಳ ಬೆಳೆ ಸಾಲ ವಿತರಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸಾಲ ವಿತರಿಸಿದ ಮಾಹಿತಿ, ಡಿ.ಸಿ.ಸಿ ಬ್ಯಾಂಕುಗಳಲ್ಲಿರುವ ಬಂಡವಾಳ ಮತ್ತು ನಬಾರ್ಡ್‌ನ ಪುನರ್ಧನ ಆಧರಿಸಿ ಪ್ರತಿ ಜಿಲ್ಲೆಗೆ ಸರಾಸರಿ ೧.೧೩ ಲಕ್ಷ ರೈತರಿಗೆ ರೂ. ೮೦೬.೦೦ ಕೋಟಿಗಳ ಅಲ್ಪಾವಧಿ ಕೃಷಿ ಸಾಲ ವಿತರಿಸಲು ಉದ್ದೇಶಿಸಲಾಗಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ / ಡಿ.ಸಿ.ಸಿ ಬ್ಯಾಂಕುಗಳು / ಪಿಕಾರ್ಡ್ ಬ್ಯಾಂಕುಗಳ ಮೂಲಕ ೨೦೨೩-೨೪ನೇ ಸಾಲಿನಲ್ಲಿ ೩೫ ಲಕ್ಷ ರೈತರಿಗೆ ರೂ. ೨೫,೦೦೦/- ಕೋಟಿಗಳಷ್ಟು ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದ್ದು, ೨೯,೨೬,೯೧೦ ರೈತರಿಗೆ ರೂ. ೨೨,೯೮೨.೧೦ ಕೋಟಿಗಳ ಬೆಳೆ ಸಾಲ, ೫೪,೨೫೫ ರೈತರಿಗೆ ರೂ. ೧೫೧೭.೭೭ ಕೋಟಿಗಳ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಹೀಗೆ ಒಟ್ಟು ೨೯,೮೧,೧೬೫ ರೈತರಿಗೆ ರೂ. ೨೪,೪೯೯.೮೭ ಕೋಟಿಗಳ ಕೃಷಿ ಸಾಲ ವಿತರಿಸಲಾಗಿದ್ದು, ಶೇಕಡ ೯೮ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.