ಬೆಂಗಳೂರು: ಸಾರ್ವಜನಿಕರಿಗೆ ಹಣ, ಚಿನ್ನ ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡ ಅವರ ಆಸ್ತಿ ಮೂಲದ ಕುರಿತು ಪರಿಶೀಲನೆ ಮಾಡುವಂತೆ ಕೋರಿ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಪೊಲೀಸರು ಪತ್ರ ಬರೆದಿದ್ದಾರೆ.
ಮಾಜಿ ಸಂಸದ ಡಿ.ಕೆ.ಸುರೇಶ್ ಸಂಬಂಧಿ ಎಂಬುದಾಗಿ ಹೇಳಿಕೊಂಡು ಚಿನ್ನದ ವ್ಯಾಪಾರಿ, ಉದ್ಯಮಿ ಹಾಗೂ ವೈದ್ಯರಿಂದ ಕೋಟ್ಯಂತರ ರೂಪಾಯಿ ಪಡೆದು, ವಾಪಸ್ ನೀಡದೆ ವಂಚನೆ ಮಾಡಿರುವ ಸಂಬಂಧ ಐಶ್ವರ್ಯಾಗೌಡ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಅವರ ಮನೆ ಮೇಲೆ ದಾಳಿ ನಡೆಸಿದ್ದ ವೇಳೆ ಚಿನ್ನಾಭರಣ, ಬೆಳ್ಳಿ ಹಾಗೂ ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದರು. ಬ್ಯಾಂಕ್ ಖಾತೆ ಪರಿಶೀಲನೆ ವೇಳೆ ಸುಮಾರು ೭೦ ಕೋಟಿ ವಹಿವಾಟು ನಡೆದಿರುವುದು ಪತ್ತೆಯಾಗಿತ್ತು. ಹಾಗಾಗಿ ಕೆಲ ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಈಗ ಜಾರಿ ನಿರ್ದೇಶನಾಲಯಕ್ಕೂ ಪತ್ರ ಬರೆದಿದ್ದಾರೆ.
ಐಶ್ವರ್ಯಾ ಅವರು ರಾಜ್ಯದ ಹಲವು ಪ್ರಭಾವಿ ರಾಜಕಾರಣಿಗಳ ಜತೆಗೆ ಸಂಪರ್ಕ ಹೊಂದಿರುವುದು ಹಾಗೂ ಹಲವರಿಗೆ ವಂಚಿಸಿದ ಹಣದಲ್ಲಿ ರಾಜಕಾರಣಿಗಳ ಜತೆಗೆ ವಹಿವಾಟು ನಡೆಸಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ನಡುವೆ ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಎಸಿಪಿ ಭರತ್ ರೆಡ್ಡಿ ವಿರುದ್ಧ ಆರೋಪ ಮಾಡಿರುವ ಐಶ್ವರ್ಯಾ ಗೌಡ, ನನ್ನ ಮನೆಗೆ ಮಹಜರು ಮಾಡಲು ಬಂದ ಸಂದರ್ಭದಲ್ಲೂ ಅಧಿಕಾರಿ ಸರಿಯಾಗಿ ನಡೆದುಕೊಂಡಿಲ್ಲ. ಮನೆಯ ಮಾಲೀಕರಿಗೆ ನನ್ನ ಬಗ್ಗೆ ಕೆಟ್ಟದಾಗಿ ಹೇಳಿದ್ದಾರೆ. ಭರತ್ ರೆಡ್ಡಿ ಅವರಿಂದ ವೈಯಕ್ತಿಕವಾಗಿ ತೊಂದರೆ ಆಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದೆ. ಇದರಿಂದ ಕೋಪಗೊಂಡು ನನ್ನ ವಿರುದ್ಧ ತನಿಖಾ ಸಂಸ್ಥೆಗೆ ಪತ್ರ ಬರೆದಿದ್ದಾರೆ’ ಎಂದು ಐಶ್ವರ್ಯಾ ಗೌಡ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡಿ.ಕೆ.ಸುರೇಶ್ ಅವರಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ನಾನು ತಪ್ಪು ಮಾಡಿದ್ದೇನೋ ಇಲ್ಲವೋ ಎಂಬುದು ಮುಂದೆ ಗೊತ್ತಾಗುತ್ತದೆ. ಪೊಲೀಸ್ ಅಧಿಕಾರಿಯೊಬ್ಬರ ಜತೆ ಗೋವಾ ಪ್ರವಾಸ ಹೋಗಿದ್ಧೆ ಎಂಬ ಆರೋಪವೂ ಸುಳ್ಳು. ಈ ರೀತಿಯ ಆರೋಪಗಳನ್ನು ಯಾಕೆ ಮಾಡುತ್ತಾರೋ ಗೊತ್ತಿಲ್ಲ. ನನ್ನ ಕುಟುಂಬದವರನ್ನು ಹೊರತುಪಡಿಸಿ ಯಾರ ಜತೆಯೂ ಪ್ರವಾಸ ಹೋಗಿಲ್ಲ. ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ’ ಎಂದು ಹೇಳಿದ್ದಾರೆ. `ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನನ್ನನ್ನು ಕಚೇರಿಗೆ ಕರೆಸಿಕೊಂಡು ವಿಚಾರಣೆ ಮಾಡಿ ಕಳುಹಿಸಿದರು. ಆದರೆ, ವಿಚಾರಣೆಗೆ ಕರೆಸಿಕೊಳ್ಳುವ ಪೊಲೀಸರು, ಸಂಜೆ ೬ ಗಂಟೆಗೆ ವಿಚಾರಣೆ ಮುಕ್ತಾಯವಾಗಿದೆ ಎಂಬ ಪತ್ರಕ್ಕೆ ಸಹಿ ಮಾಡಿಸಿಕೊಳ್ಳುತ್ತಾರೆ. ಆದರೆ, ರಾತ್ರಿವರೆಗೂ ವಿಚಾರಣೆ ಮಾಡುತ್ತಾರೆ’ ಎಂದು ಆರೋಪಿಸಿದರು.