ಮೈಸೂರು : ಕರ್ತವ್ಯನಿರತ ವೈದ್ಯರೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಬುಧವಾರ ಮಧ್ಯರಾತ್ರಿ ನಗರದ ಅಲ್ ಅನ್ಸಾರ್ ಆಸ್ಪತ್ರೆಯಲ್ಲಿ ನಡೆದಿದೆ.
ಡಾ.ರೇಹಾನ್ ಅಹಮದ್ ಹಲ್ಲೆಗೆ ಒಳಗಾದ ವೈದ್ಯರಾಗಿದ್ದಾರೆ.
ಘಟನೆ ವಿವರ: ಬುಧವಾರ ಮಧ್ಯರಾತ್ರಿ ಸುಮಾರು ೧೨ ಗಂಟೆಗೆ ಕೈ ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದ ೭ ವರ್ಷದ ಬಾಲಕಿಯೊಬ್ಬಳನ್ನು ಇಬ್ಬರು ಪುರುಷರು ಮತ್ತು ನಾಲ್ವರು ಮಹಿಳೆಯರು ಅಲ್ ಅನ್ಸಾರ್ ಆಸ್ಪತ್ರೆಗೆ ಕರೆತಂದರು. ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಡಾ.ರೇಹಾನ್ ಅಹಮದ್ ಕೂಡಲೇ ಬಾಲಕಿಗೆ ಪ್ರಥಮ ಚಿಕಿತ್ಸೆ ನೀಡಿ, ಎಕ್ಸ್‌ರೇ ತೆಗೆಸಲು ಹೇಳಿದರು. ಎಕ್ಸ್‌ರೇ ವರದಿಯಲ್ಲಿ ಯಾವುದೇ ಮೂಳೆ ಮುರಿತದಂತಹ ಗಂಭೀರ ಗಾಯ ಇಲ್ಲದ ಕಾರಣ ಬೆರಳಿನ ಗಾಯಕ್ಕೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಏಕಾಏಕಿ ಇಬ್ಬರು ಪುರುಷರು ಎಮರ್ಜೆನ್ಸಿ ವಾರ್ಡಿಗೆ ನುಗ್ಗಿ ವೈದ್ಯರಿಗೆ ಮುಷ್ಠಿಯಿಂದ ಥಳಿಸಿ ಹಲ್ಲೆ ನಡೆಸಿ, ಪರಾರಿಯಾದರು ಎನ್ನಲಾಗಿದೆ. ಘಟನೆಯಿಂದ ವೈದ್ಯರು ಮತ್ತು ನರ್ಸ್‌ಗಳು ಗಾಭರಿಗೊಂಡಿದ್ದರು.
ಹಲ್ಲೆ ನಡೆದ ಸಂದರ್ಭದಲ್ಲಿ ಆಸ್ಪತ್ರೆ ಸೆಕ್ಯೂರಿಟಿ ಸ್ಥಳದಲ್ಲಿ ಇರಲಿಲ್ಲ. ಜತೆಗೆ ಯಾರೊಬ್ಬರೂ ವೈದ್ಯರ ನೆರವಿಗೆ ಬರಲಿಲ್ಲ ಎಂದು ವೈದ್ಯರು ದೂರಿದರು. ಬಳಿಕ ಹಲ್ಲೆಗೊಳಗಾದ ವೈದ್ಯರು, ಆಸ್ಪತ್ರೆಗೆ ಮಾಹಿತಿ ನೀಡಿ, ತಮ್ಮ ಪೋಷಕರನ್ನು ಕರೆಸಿ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ದೂರು ನೀಡಿ ಹಲ್ಲೆಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.