ಗುಂಡ್ಲುಪೇಟೆ: ತಾಲೂಕು ತೋಟದ ಬೆಳೆಗಳ ಸಂಸ್ಕರಣಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಲತ್ತೂರು ಬೋರೇಗೌಡ ಆಯ್ಕೆಯಾದರು.
ಪಟ್ಟಣದ ಸಂಘದ ಕಚೇರಿಯಲ್ಲಿ ಎಂ.ಮಲಿಯಶೆಟ್ಟಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಂದು ನಾಮಪತ್ರ ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಪದ್ಮಾನಂದ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಆಲತ್ತೂರು ಬೋರೇಗೌಡ ಮಾತನಾಡಿ, ಕ್ಷೇತ್ರದ ಶಾಸಕರು, ಸಂಘದ ಎಲ್ಲಾ ಸದಸ್ಯರು, ಮಾಜಿ ಅಧ್ಯಕ್ಷರು ಎಲ್ಲರೂ ವಿಶ್ವಾಸವಿಟ್ಟು ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ್ದೀರಿ. ಅದರಂತೆ ಎಲ್ಲರ ಸಹಕಾರ ಪಡೆದು ಸಂಘವನ್ನು ಉತ್ತಮ ಹಂತಕ್ಕೆ ಕೊಂಡೋಯ್ಯುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಮಾತನಾಡಿ, ಗುಂಡ್ಲುಪೇಟೆ ತೋಟದ ಬೆಳೆಗಳ ಸಂಸ್ಕರಣ ಸಹಕಾರ ಸಂಘವು ರಾಜ್ಯಕ್ಕೆ ಮಾದರಿಯಾಗಿದೆ. ಎಚ್.ಎಸ್.ಮಹದೇವಪ್ರಸಾದ್ ಮಾರ್ಗದರ್ಶನದಲ್ಲಿ ಸಂಘದ ಏಳಿಗೆಗೆ ಸ್ಥಾಪಕ ಅಧ್ಯಕ್ಷ ಅನ್ವರ್‍ಪಾಷ ತಮ್ಮದೇ ಕೊಡುಗೆ ನೀಡಿದರು. ನಂತರದಲ್ಲಿ ಬಂದವರು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತುತ ಸಂಘದ ಮಾರಾಟ ಚಟುವಟಿಕೆಗಳಿಗೆ ಹಿನ್ನಡೆಯಿರುವ ಕಾರಣ ಸಂಘದವರ ಕೋರಿಕೆಯಂತೆ ಸಂಘವು ಮಡಹಳ್ಳಿ ರಸ್ತೆಯಲ್ಲಿರುವ ಹೊಂದಿರುವ ನಿವೇಶನದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಶಾಸಕರಾದ ಎಚ್.ಎಂ.ಗಣೇಶ್‍ಪ್ರಸಾದ್ ರಿಂದ ಮತ್ತು ಸಂಬಂಧಪಟ್ಟ ಇಲಾಖೆ ಸಚಿವರು, ವಿಧಾನ ಪರಿಷತ್ ಸದಸ್ಯರಿಂದ ನೆರವು ಕೊಡಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಮಲಿಯಶೆಟ್ಟಿ, ಉಪಾಧ್ಯಕ್ಷ ಕೆ.ಬಸವಣ್ಣ, ನಿರ್ದೇಶಕರಾದ ಎಚ್.ಎಸ್.ನಂಜುಂಡಸ್ವಾಮಿ, ಎಚ್.ಎಂ.ನಾಗರಾಜಪ್ಪ, ವೈ.ಎನ್.ರಾಜಶೇಖರ್, ನೀಲಕಂಠಪ್ಪ, ಅಬ್ದುಲ್‍ಜಬ್ಬಾರ್, ಎಚ್.ಬಿ.ಶಿವಕುಮಾರ್, ಎಂ.ಶಿವಣ್ಣ, ಶಿವಮ್ಮ, ಸರೋಜಮ್ಮ, ನಾಗರಾಜು, ಎಸ್.ರಾಜಶೇಖರ್, ಸಂಘದ ಸಿಇಒ ಶ್ರೀಕಂಠಪ್ಪ ಹಾಜರಿದ್ದರು.