ಗುಂಡ್ಲುಪೇಟೆ: ಪಟ್ಟಣದಲ್ಲಿ ಆರೋಗ್ಯ ಮತ್ತು ಪೊಲೀಸ್ ಇಲಾಖೆಯವರು ತಂಬಾಕು ನಿಯಂತ್ರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾರಾಟಗಾರರಿಗೆ ದಂಡ ವಿಧಿಸುವ ಮೂಲಕ ಜಾಗೃತಿ ಮೂಡಿಸಿದರು.
ಪಟ್ಟಣದ ಪ್ರಮುಖ ಬೀದಿಗಳ ಅಂಗಡಿ, ಸ್ಟಾಲ್‌ಗಳು, ಟೀ ಕ್ಯಾಂಟೀನ್ ಇತರೆ ಕಡೆಗಳಲ್ಲಿ ಪರಿಶೀಲನೆ ನಡೆಸಿದರು. ತಂಬಾಕು ಉತ್ಪನ್ನಗಳನ್ನು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಹೀಗಾಗಿ ತಂಬಾಕು ಉತ್ಪನ್ನಗಳನ್ನು ಪ್ರದರ್ಶನ ಮಾಡುವ ರೀತಿಯಲ್ಲಿ ಇಟ್ಟಿರುವುದು ಖರೀದಿಗೆ ಪ್ರಚೋದನೆ ನೀಡಿದಂತಾಗುತ್ತದೆ. ಇದು ಕಾನೂನಿಗೆ ವಿರುದ್ಧವಾಗಿದ್ದು, ಕಾಣದಂತೆ ಇಡಬೇಕು ಎಂದು ಸಲಹೆ ನೀಡಿದರು. ನಿಯಮ ಉಲ್ಲಂಘಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಂತಹವರಿಗೆ ದಂಡ ವಿಧಿಸಿದರು.
ಆರೋಗ್ಯ ಇಲಾಖೆಯ ಸ್ವಾಮಿ, ಪ್ರಸಾದ್, ವೀರಣ್ಣ, ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಶಿವಮಲ್ಲಪ್ಪ, ಪೊಲೀಸ್ ಪೇದೆ ಬಸವರಾಜು ಹಾಜರಿದ್ದರು.