ನವದೆಹಲಿ: ಮಣಿಪುರದ ಪರಿಸ್ಥಿತಿ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮಧ್ಯಾಹ್ನ 3 ಗಂಟೆಗೆ ರಾಷ್ಟ್ರ ರಾಜಧಾನಿಯಲ್ಲಿ ಸರ್ವಪಕ್ಷಗಳ ಸಭೆ ನಡೆಸಲಿದ್ದಾರೆ.
ಮೇ 3 ರಿಂದ ಮಣಿಪುರದಲ್ಲಿ ಬೆಂಕಿ ಹಚ್ಚುವಿಕೆಯಂತಹ ಘಟನೆಗಳು ನಡೆಯುತ್ತಿದ್ದು, ಶಾಂತಿಗೆ ಭಂಗ ತರುವುದನ್ನು ತಡೆಯುವ ಪ್ರಯತ್ನದಲ್ಲಿ ರಾಜ್ಯ ಸರ್ಕಾರವು ತಕ್ಷಣವೇ ಜಾರಿಗೆ ಬರುವಂತೆ ಜೂನ್ 25 ರವರೆಗೆ ಇಂಟರ್ನೆಟ್ ಮೇಲಿನ ನಿಷೇಧವನ್ನು ಇನ್ನೂ ಐದು ದಿನಗಳವರೆಗೆ ವಿಸ್ತರಿಸಿದೆ.
ರಾಜ್ಯದಲ್ಲಿನ ಅಶಾಂತಿಯ ದೃಷ್ಟಿಯಿಂದ ಡೇಟಾ ಸೇವೆಗಳನ್ನು ಸಹ ನಿಷೇಧಿಸಲಾಗಿದೆ. ಮಣಿಪುರದಲ್ಲಿ ಮೇ 3 ರಂದು ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ (ಎಟಿಎಸ್ ಯು) ಮೇಟಿ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್ ಟಿ) ಪಟ್ಟಿಗೆ ಸೇರಿಸುವ ಬೇಡಿಕೆಯನ್ನು ಪ್ರತಿಭಟಿಸಲು ಆಯೋಜಿಸಿದ್ದ ರ್ಯಾಲಿಯಲ್ಲಿ ಘರ್ಷಣೆಗಳು ಉಂಟಾದ ನಂತರ ಹಿಂಸಾಚಾರಗಳು ನಡೆಯುತ್ತಿವೆ.
ಜನಾಂಗೀಯ ಹಿಂಸಾಚಾರ ಮತ್ತು ಘರ್ಷಣೆಯ ಹಿನ್ನೆಲೆಯಲ್ಲಿ ಮಣಿಪುರ ಪರಿಸ್ಥಿತಿಯ ಕುರಿತು ಚರ್ಚಿಸಲು ಜೂನ್ 24 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದಿರುವ ಸರ್ವಪಕ್ಷ ಸಭೆಯ ಸಮಯವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಶ್ನಿಸಿದ್ದು, ಪ್ರಧಾನಿ ಇಲ್ಲದ ಸಮಯದಲ್ಲಿ ಸಭೆ ಕರೆಯಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 50 ದಿನಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ, ಆದರೆ ಪ್ರಧಾನಿ ಮೌನವಾಗಿದ್ದಾರೆ ಸ್ವತಃ ಪ್ರಧಾನಿಯೇ ದೇಶದಲ್ಲಿ ಇಲ್ಲದಿದ್ದಾಗ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು! ಸ್ಪಷ್ಟವಾಗಿ, ಪ್ರಧಾನಿಗೆ ಈ ಸಭೆ ಮುಖ್ಯವಲ್ಲ ಎಂದು ಟೀಕಿಸಿದ್ದಾರೆ.



