ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆ-೨೦೨೪ರ ಮತ ಏಣಿಕೆಗೆ ಸಂಬಂಧಿಸಿದಂತೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ರಾಮನಗರ ಇಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆ ಕಾರ್ಯವನ್ನು ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಕ್ರಮವಹಿಸಲು ಅಪರ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಶಿವಾನಂದ ಮೂರ್ತಿ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮತ ಏಣಿಕೆ ಕಾರ್ಯದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೂನ್ ೪ ರಂದು ನಡೆಯುವ ಮತ ಎಣಿಕೆ ಕಾರ್ಯ ನಿಮಿತ್ತ ಯಾವುದೇ ವ್ಯಕ್ತಿ/ರಾಜಕೀಯ ಪಕ್ಷದ ಪ್ರತಿನಿಧಿಗಳು ಮತ್ತು ಏಜೆಂಟರ್‌ಗಳು ಮತ ಎಣಿಕೆ ಕೇಂದ್ರದ ಮುಖ್ಯದ್ವಾರದಿಂದ ಮೊಬೈಲ್ ಪೋನ್ ತರುವುದನ್ನು/ಬಳಸುವುದನ್ನು ನಿಷೇಧಿಸಿದೆ. ಮತ ಏಣಿಕೆ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಸಿಸಿ ಟಿವಿ ಅಳವಡಿಕೆ, ಅಗ್ನಿಶಾಮಕ ದಳ, ವಿವಿಧ ರಾಜಕೀಯ ಪಕ್ಷಗಳ ಏಜೆಂಟರುಗಳಿಗೆ ಮತ್ತು ಮತ ಏಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗುರುತಿನ ಚೀಟಿಯನ್ನು ವಿತರಿಸುವುದು, ಮತ ಎಣಿಕೆ ಕಾರ್ಯಕ್ಕೆ ಅವಶ್ಯಕವಿರುವ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನಿಯೋಜಿಸುವಂತೆ, ಆರೋಗ್ಯ ಇಲಾಖೆಯವರು ನುರಿತ ವೈದ್ಯರ ತಂಡ, ಎರಡು ಆಂಬುಲೆನ್ಸ್ ಹಾಗೂ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಹಾಗೂ ಚುನಾವಣಾ ಸಿಬ್ಬಂದಿಗಳಿಗೆ ಉಪಹಾರ, ಊಟ ಹಾಗೂ ನೀರಿನ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಸಭೆಯಲ್ಲಿ ಡಿಡಿಎಲ್‌ಆರ್ ಹನುಮೇಗೌಡ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ರಾಜು ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.