ಮದ್ದೂರು: ಮಾ.25 ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 3634 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ ತಿಳಿಸಿದರು. ಪಟ್ಟಣದ ಬಿಇಒ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲಕರು 1944, ಬಾಲಕಿಯರು 1690 ಒಟ್ಟು 3634 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದು, ಪರೀಕ್ಷೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು. ಈ ಬಾರಿಯ ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಅವಳಡಿಸಿರುವ ಸಿ.ಸಿ.ಕ್ಯಾಮರಗಳ ಮೂಲಕ ಪರೀಕ್ಷಾ ಚಟುವಟಿಕೆಗಳನ್ನು ಕೇಂದ್ರೀಕೃತವಾಗಿ ವೀಕ್ಷಣೆ ಮಾಡಲು ಸಾಧ್ಯವಾಗುವಂತೆ ಪರೀಕ್ಷಾ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ಪರೀಕ್ಷೆ ಸಮಯದಲ್ಲಿ ಸಣ್ಣ ಪ್ರಮಾಣ ತಪ್ಪು ನಡೆದರೂ ಸಂಬಂಧಿಸಿದರು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಪರೀಕ್ಷೆಯಲ್ಲಿ ಭಾಗವಹಿಸುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಈ ಬಾರಿ ಪರೀಕ್ಷೆಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಬಿಸಿ ಊಟ ವ್ಯವಸ್ಥೆ ಆಯೋಜನೆ ಮಾಡಲಾಗಿದೆ ಎಂದರು.
ತಾಲೂಕಿನಲ್ಲಿ 39 ಸರ್ಕಾರಿ, ಅನುದಾನಿತ 18, ವಸತಿ 25 ಒಟ್ಟು 88 ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದು, ಪರೀಕ್ಷಾ ಕೇಂದ್ರಗಳು 12, ಮುಖ್ಯ ಅಧೀಕ್ಷಕರು 12, ಉಪ ಅಧೀಕ್ಷರು 12, ಕಸ್ಟೋಡಿಯನ್ 12, ಸ್ಥಾನಿಕ ಜಾಗೃತ ದಳ 12, ಮೊಬೈಲ್ ಸ್ವಾಧಿನಾಧಿಕಾರಿಗಳು 12, ಕೊಠಡಿ ಮೇಲ್ವಿಚಾರಕರು 242 ಮಂದಿ ಪರೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆಂದು ವಿವರಿಸಿದರು.
ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮದ್ದೂರು, ಭಾರತಿ ಪ್ರೌಡಶಾಲೆ ಭಾರತೀನಗರ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಸಗರಹಳ್ಳಿ, ಜವಹರ್ ಪ್ರೌಢಶಾಲೆ ಮದ್ದೂರು, ಗಾಂಧಿ ಸಂಯುಕ್ತ ಪದವಿ ಪೂರ್ವ ಕಾಲೇಜು ಬೆಕ್ಕಳಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಕೆಸ್ತೂರು, ಸರ್ಕಾರಿ ಪದವಿ ಪೂರ್ವ ಕಾಲೇಜು ಚಂದೂಪುರ, ಚಾಮ್ ಷುಗರ್ ಪ್ರೌಢಶಾಲೆ ಭಾರತೀನಗರ, ಸರ್ಕಾರಿ ಪದವಿ ಪೂರ್ವ ಕಾಲೇಜು ಕೆ.ಹೊನ್ನಲಗೆರೆ, ಪೂರ್ಣಪ್ರಜ್ಞಾ ಪ್ರೌಢಾಶಾಲೆ ಶಿವಪುರ, ಬಾಲಕಿಯರ ಸಪಪೂ ಕಾಲೇಜು ಕೊಪ್ಪ ಹಾಗೂ ಸರ್ಕಾರಿ ಪ್ರೌಢಶಾಲೆ ಭಾರತಿನಗರ ಇವುಗಳನ್ನು ಪರೀಕಾ ಕೇಂದ್ರಗಳಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ತಾಲೂಕು ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಕೆ.ಆರ್.ಲೋಕೇಶ್, ಶಿಕ್ಷಣ ಸಂಯೋಜಕರಾದ ಎಂ.ಪಿ.ಮಹೇಶ್, ಎಂ.ಪಿ.ನಟೇಶ್, ಕ್ಷೇತ್ರ ಸಮನ್ವಯಾಧಿಕಾರಿ ಹನುಮಶೆಟ್ಟಿ ಇದ್ದರು.