ಹಲಗೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ನೀಡಿದ್ದ ಭರವಸೆ ಈಡೇರಿಸಲು ಬದ್ಧನಾಗಿದ್ದು, ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭರವಸೆ ನೀಡಿದರು. ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅನುದಾನದ ಅಡಿಯಲ್ಲಿ ೨ ಕೋಟಿ ರು.ವೆಚ್ಚದಲ್ಲಿ ವಿವಿಧ ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಮತ್ತು ೩ ಕೋಟಿ ವೆಚ್ಚದಲ್ಲಿ ಧನಗೂರು ಗ್ರಾಮದಲ್ಲಿ ನೂತನ ಎಂಯುಎಸ್‌ಎಸ್ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಯತ್ತಂಬಾಡಿ ಗ್ರಾಮದಲ್ಲಿ ಶ್ರೀಕಾಳೇಶ್ವರ ಸ್ವಾಮಿ ದೇವಾಲಯದ ಬಳಿ ಸಮುದಾಯ ಭವನ ಮತ್ತು ಬಾಣಸಮುದ್ರ ಗ್ರಾಮದಲ್ಲಿ ಬೆಂಗಳೂರಯ್ಯ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ಚುನಾವಣೆಯಲ್ಲಿ ಭರವಸೆ ನೀಡಿದ್ದು, ಕೊಟ್ಟ ಮಾತಿನಂತೆ ಮುಂದಿನ ದಿನಗಳಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಕಸಬಾ ಹೋಬಳಿಯ ಅಂತರವಳ್ಳಿ, ಯತ್ತಂಬಾಡಿ, ಬೆಳತೂರು, ಅಪ್ಪಾಜಯ್ಯನದೊಡ್ಡಿ, ಬಾಣಗಹಳ್ಳಿ, ಹುಲ್ಲಹಳ್ಳಿ, ಹುಲ್ಲಾಗಾಲ, ದಡಮಹಳ್ಳಿ, ಬಾಣಸಮುದ್ರ, ಕೋಡಿಪುರ, ಚೆನ್ನೀಪುರ, ಡಿ.ಹಲಸಹಳ್ಳಿ, ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನಡೆಸಿದ್ದು, ಈಗಾಗಲೇ ಇನ್ನೂ ಹಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಲೋಕಸಭಾ ಚುನಾವಣೆಯ ನಂತರ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.
ನೂರಾರು ಕೋಟಿ ಅನುದಾನದಿಂದ ಕ್ಷೇತ್ರ ಸಮಗ್ರ ಅಭಿವೃದ್ಧಿ ಮಾಡುವೆ: ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜೊತೆಗೆ ನೂರಾರು ಕೋಟಿ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ವಿರೋಧಿಗಳ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗಿದೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು. ತಾಲೂಕಿನ ನಾಗೇಗೌಡನದೊಡ್ಡಿ, ತಂಮ್ಮಡಹಳ್ಳಿ, ಮೊಳೇದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು ೮.೫ ಕೋಟಿ ರು. ವೆಚ್ಚದ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದರು.