ಮೈಸೂರು: ಅಂಬೇಡ್ಕರರ ಎಲ್ಲ ಕೆಲಸಗಳೂ ತತ್ವಗಳ ಒಳಗೇ ಕಟ್ಟಿಕೊಟ್ಟಿದ್ದಾಗಿದೆ. ಭಾರತೀಯ ಚಿಂತನೆಗಳನ್ನು ಹೊರತುಪಡಿಸಿ ಬಾಬಾ ಸಾಹೇಬರು ಏನನ್ನೂ ಯೋಚಿಸಲಿಲ್ಲ ಎಂದು ಸಂವಿಧಾನ ತಜ್ಞ ಡಾ. ಸುಧಾಕರ ಹೊಸಳ್ಳಿ ಅವರು ಹೇಳಿದರು.
ಇನ್ಸ್ಟಿಟ್ಯೂಟ್ ಆಫ಼್ ಇಂಜಿನಿಯರ್ಸ್ ಸಭಾಂಗಣದಲ್ಲಿ ಮಂಥನ ಮೈಸೂರು ಆಯೋಜಿಸಿದ್ದ ‘ಎಲ್ಲರಿಗೂ ಬೇಕಾದ ಅಂಬೇಡ್ಕರ್’ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಪರಿಚಯ ಮಾಡಿಕೊಡುತ್ತಾ ಮಾತನಾಡಿದರು.
ಖ್ಯಾತ ಚಿಂತಕರು ಹಾಗೂ ಪುಸ್ತಕದ ಲೇಖಕರೂ ಆದ ಡಾ. ಜಿ. ಬಿ. ಹರೀಶ ಅವರು ಮಾತನಾಡುತ್ತಾ ಅಂಬೇಡ್ಕರ್ ಅವರನ್ನು ಬಾಲ್ಯದಲ್ಲಿ ಓದುವುದು ಬೇರೆ, ಯೌವನದಲ್ಲಿ ಓದುವುದು ಬೇರೆ, ವೃದ್ಧಾಪ್ಯದಲ್ಲಿ ಓದುವುದು ಬೇರೆ. ಪ್ರತಿ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಬೇರೆಯಾಗಿಯೇ ಕಾಣಿಸುತ್ತಾರೆ. ನಿಜವಾದ ಅಂಬೇಡ್ಕರ್ ಬೇರೆ, ಸಮಾಜಕ್ಕೆ ಈಗ ತೋರಿಸಲಾಗುತ್ತಿರುವ ಅಂಬೇಡ್ಕರ್ ಬೇರೆ. ಚಳುವಳಿಯ ಲಾಭವನ್ನು ಪಡೆಯುವ ಕೆಲವರ ಉದ್ದೇಶದಿಂದ ಅಂಬೇಡ್ಕರ್ ಎಲ್ಲರಿಗೂ ತಲುಪದೇ ಹೋದರು ಎಂದು ಅವರು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಪ್ರೊ. ಎನ್.ಕೆ. ಲೋಕನಾಥ್ ಅವರು ಮಾತನಾಡಿ ಅಂಬೇಡ್ಕರ್ ಅವರ ಹಲವಾರು ಸಾಧನೆಗಳ ಕುರಿತು ಮಾಹಿತಿಗಳನ್ನು ನೀಡಿದರು. ಇವೆಲ್ಲ ವಿಷಯಗಳು ಸಾಮಾನ್ಯ ಜನರಿಗೆ ತಲುಪಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಕೊನೆಯಲ್ಲಿ ಪ್ರೇಕ್ಷರೊಂದಿಗೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮವು ಹಲವಾರು ಆಧಾರ ಸಹಿತ ಚಿಂತನ ಮಂಥನಗಳಿಗೆ ವೇದಿಕೆಯಾಯಿತು.