ಬೆಂಗಳೂರು : ಮುಡಾ ಹಗರಣ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದಿಟ್ಟಿದ್ದು, ಇದರ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ಭೂ ಹಗರಣ ಆರೋಪ ಕೇಳಿಬಂದಿದೆ. ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಏರೋಸ್ಪೇಸ್ ಪಾರ್ಕ್‌ನಲ್ಲಿನ ೪೫.೯೪ ಎಕರೆ ಪೈಕಿ ಐದು ಎಕರೆ ಜಮೀನನ್ನು ಯಾವ ಆಧಾರದ ಮೇಲೆ ಟ್ರಸ್ಟ್‌ಗೆ ಮಂಜೂರು ಮಾಡಿದ್ದೀರಿ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಪ್ರಶ್ನಿಸಿದ್ದರು.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಏರೋಸ್ಪೇಸ್ ಪಾರ್ಕ್‌ನಲ್ಲಿನ ಸಿಎ ನಿವೇಶನವನ್ನು ಕಾನೂನಿನ ಪ್ರಕಾರವೇ ನಿಗದಿತ ಬೆಲೆಗೆ ಕೊಡಲಾಗಿದೆ. ಅಲ್ಲಿ ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದಾರೆ. ಇದರಲ್ಲಿ ಯಾವ ನಿಯಮವೂ ಉಲ್ಲಂಘನೆ ಆಗಿಲ್ಲ ಎಂದು ಹೇಳಿದ್ದಾರೆ.