ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ: ಹೆಸರು ಹಾಗೂ ಬ್ರಾಂಡ್ ನಕಲು ಮಾಡಿದಆರೋಪದ ಮೇರೆಗೆ ಇಲ್ಲಿನ ಜಿಲ್ಲಾ ಮತ್ತು ವಾಣಿಜ್ಯ ನ್ಯಾಯಾಲಯವು, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಕೃತಕ ಬುದ್ಧಿಮತ್ತೆ (ಎಐ) ಕಂಪನಿ ‘ಆಂಥೋಪಿಕ್ ಪಿಬಿಸಿ’ಗೆ ಎರಡನೇ ಬಾರಿಗೆ ನೋಟಿಸ್ ಜಾರಿ ಮಾಡಿದೆ.
ಮಾರ್ಚ್ 9ರಂದು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ.ಬೆಳಗಾವಿಯ ಬಾಕ್ಸೆಟ್ ರಸ್ತೆಯಲ್ಲಿ ‘ಆಂಥೋಪಿಕ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್’ ಎಂಬ ಹೆಸರಿನ ಕಂಪನಿ 2017ರಲ್ಲಿ ಆರಂಭವಾಗಿದೆ. ಆಗಲೇ ಕಂಪನಿ ಹೆಸರನ್ನೂ ನೋಂದಣಿ ಮಾಡಲಾಗಿದೆ. ಇದೇ ಹೆಸರಿನ ಎಐ ಕಂಪನಿಯೊಂದು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಂತರ ಆರಂಭವಾಗಿದೆ. ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಇದರ ಶಾಖಾ ಕಚೇರಿ ತೆರೆಯಲಾಗಿದೆ.ತಮ್ಮ ಕಂಪನಿ ಹೆಸರನ್ನು ನಕಲು ಮಾಡಲಾಗಿದೆ ಎಂದು ಆರೋಪಿಸಿ ಅಮೆರಿಕದ ಕಂಪನಿಯ ಮಾಲೀಕರು ಬೆಳಗಾವಿಯ ಕಂಪನಿಗೆ ನೋಟಿಸ್ ಜಾರಿ ಮಾಡಿದ್ದರು.
ಇಲ್ಲಿನ ಆಂಥೋಪಿಕ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ನಿರ್ದೇಶಕ ಅಯಾಜ್ ಮುಲ್ಲಾ ಇದನ್ನು ಪರೀಶಿಲಿಸಿದರು. ಆಗ, ಅಮೆರಿಕದ ಕಂಪನಿಗಿಂತಲೂ ಮುಂಚೆಯೇ ತಮ್ಮ ಕಂಪನಿ ನೋಂದಣಿ ಆಗಿದ್ದು ಪತ್ತೆಯಾಯಿತು.ಇದೇ ಕಾರಣ ಮುಂದಿಟ್ಟುಕೊಂಡು ಬೆಳಗಾವಿಯ ನ್ಯಾಯಾಲಯದಲ್ಲಿ ಅವರು ಅಮೆರಿಕ ಕಂಪನಿ ವಿರುದ್ಧ ವ್ಯಾಜ್ಯ ಹೂಡಿದರು. ‘ನಮ್ಮ ಕಂಪನಿ ಹೆಸರು, ಆನ್‌ಲೈನ್ ವ್ಯವಹಾರ ಹಾಗೂ ಕೆಲವು ಬ್ರಾಂಡ್‌ಗಳನ್ನೂ ಅಮೆರಿಕದ ಕಂಪನಿ ಕಬಳಿಸಿದೆ. ಇದಕ್ಕೆ ನ್ಯಾಯ ಕೊಡಿಸಬೇಕು’ ಎಂದೂ ಕೋರಿದರು. ಫೆ. 16ರಂದು ನ್ಯಾಯಾಲಯವು ಅಮೆರಿಕದ ಕಂಪನಿ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿತ್ತು.
ಅಂದು ಯಾರೂ ಹಾಜರಾಗದ ಕಾರಣ ಮರು ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿದೆ.ನ್ಯಾಯಾಧೀಶರಾದ ಮಂಜುನಾಥ ನಾಯಕ್ ಅವರು ಆಂಥೋಪಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಐರಿನಾ ಫೋಸ್ ಅವರಿಗೆ ಬೆಂಗಳೂರು ಉತ್ತರದಲ್ಲಿರುವ ಕಂಪನಿಗೆ ಸಮನ್ಸ್ ಜಾರಿ ಮಾಡಿದ್ದಾರೆ.’ಬೆಳಗಾವಿ ಮೂಲದ ಸಾಫ್ಟ್‌ವೇರ್ ಕಂಪನಿ ಆಂಟ್ರೊಪಿಕ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ 2017ರಲ್ಲಿ ಭಾರತದಲ್ಲಿ ನೋಂದಾಯಿಸಲ್ಪಟ್ಟಿದೆ. ಅಮೆರಿಕದ ಕಂಪನಿ 2021ರಲ್ಲಿ ಸ್ಥಾಪಿಸಲ್ಪಟ್ಟಿದೆ. ನಾವು ಪೂರ್ವ ಸ್ವಾಮ್ಯದ ಹಕ್ಕುಗಳನ್ನು ಹೊಂದಿದ್ದೇವೆ. ಆದ್ದರಿಂದ ಅಮೆರಿಕ ಮೂಲದ ಕಂಪನಿಯ ಭಾರತದಲ್ಲಿನ ಎಲ್ಲ ಸೇವೆಗಳನ್ನು ನಿಲ್ಲಿಸಲು ಎಕ್ಸ್-ಪಾರ್ಟಿ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದೇವೆ’ ಎಂದು ಮೊಹಮ್ಮದ್ ಅಯಾಜ್ ಮುಲ್ಲಾ ಮಾಹಿತಿ ನೀಡಿದರು.



