ಬೆಂಗಳೂರು: ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬ ಬಳಸಲಾಗುತ್ತದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪದ ಬಗ್ಗೆ ಕೆಎಂಎಫ್ ಒಕ್ಕೂಟದ ಅಧ್ಯಕ್ಷ ಭೀಮಾ ನಾಯ್ಕ್ ಪ್ರತಿಕ್ರಿಯಿಸಿದ್ದು, ಅವರ ಹೇಳಿಕೆಗೂ, ನಮ್ಮ ನಂದಿನಿ ಬ್ರ್ಯಾಂಡ್ ಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ೪ ವರ್ಷಗಳಿಂದ ನಂದಿನಿ ತುಪ್ಪ ಅಲ್ಲಿಗೆ ಹೋಗಿಲ್ಲ. ಈಗ ನಂದಿನಿ ತುಪ್ಪ ತಿರುಪತಿಗೆ ಸರಬರಾಜು ಮಾಡಲು ಶುರು ಮಾಡಿದ್ದೇವೆ. ೨೦೧೩-೧೮ರ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ೩ ರಿಂದ ೪ ಮೆಟ್ರಿಕ್ ಟನ್ ತುಪ್ಪ ಸರಬರಾಜು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
೨೦೧೯ರಲ್ಲಿ ಸಮ್ಮಿಶ್ರ ಸರ್ಕಾರ ಇತ್ತು. ಆ ವರ್ಷ ೧೭ ಟನ್ ಸರಬರಾಜು ಮಾಡಿದ್ದೇವೆ. ೨೦೨೦-೨೪ರವರೆಗೆ ಟಿಟಿಡಿನವರು ನಂದಿನಿ ತುಪ್ಪವನ್ನ ಸ್ಥಗಿತ ಮಾಡಿದ್ದರು. ಇಲ್ಲಿ ಹೊಸ ಸರ್ಕಾರ ಬಂದ ಮೇಲೆ ಟ್ರಸ್ಟ್ನ ಅಧಿಕಾರಿಗಳು ನಂದಿನಿ ತುಪ್ಪವನ್ನ ಹೊರಗಿಟ್ಟು ಬೇರೆ ಬೇರೆ ಬ್ರ್ಯಾಂಡ್ ತುಪ್ಪವನ್ನ ಖರೀದಿ ಮಾಡಿದ್ದಾರೆ. ಇದರ ಹಿನ್ನಲೆ ಏನು ಅಂತ ತನಿಖೆ ಮಾಡುತ್ತೇವೆ. ಭ್ರಷ್ಟಾಚಾರ ನಡೆದಿದೆ ಅಂತ ಈಗಿನ ಸಿಎಂ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.
ಟಿಟಿಡಿ ಹೊಸ ಅಧ್ಯಕ್ಷರು, ನಿರ್ದೇಶಕರೆಲ್ಲ ಸೇರಿ ನಂದಿನಿ ತುಪ್ಪ ಬೇಕು ಅಂತ ಮೇಲ್ ಮಾಡಿದ್ದರು. ಈ ಬಾರಿ ಟೆಂಡರ್ನಲ್ಲಿ ಭಾಗವಹಿಸಲು ಹೇಳಿದ್ದರು. ಹೀಗಾಗಿ ೩ ಲಕ್ಷದ ೫೦ ಸಾವಿರ ಕೆ.ಜಿ ತುಪ್ಪವನ್ನ ಟೆಂಡರ್ ತೆಗೆದುಕೊಂಡಿದ್ದೇವೆ. ಮೊದಲ ಹಂತದಲ್ಲಿ ೩೫೦ ಮೆಟ್ರಿಕ್ ಟನ್ ತುಪ್ಪವನ್ನ ಕಳೆದ ವಾರ ಸರಬರಾಜು ಮಾಡಿದ್ದೇವೆ ಎಂದಿದ್ದಾರೆ.