Friday, July 3, 2026
Google search engine

Homeರಾಜ್ಯಎಸ್ ​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ : ಮತ್ತೊಂದು ವಿಡಿಯೋ ರಿಲೀಸ್ ಮಾಡಿದ ಹೆಚ್.ಡಿ. ಕುಮಾರಸ್ವಾಮಿ!

ಎಸ್ ​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ : ಮತ್ತೊಂದು ವಿಡಿಯೋ ರಿಲೀಸ್ ಮಾಡಿದ ಹೆಚ್.ಡಿ. ಕುಮಾರಸ್ವಾಮಿ!

ಬೆಂಗಳೂರು : ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಇಂದು ಮತ್ತೊಂದು ಸ್ಫೋಟಕ ವಿಡಿಯೋ ಸಾಕ್ಷ್ಯವನ್ನು ಬಿಡುಗಡೆ ಮಾಡಿದ್ದಾರೆ.

ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಪ್ರದರ್ಶಿಸಲಾಯಿತು. ಈ ವಿಡಿಯೋದಲ್ಲಿ ಬಿಎಲ್ಒಗಳು (BLO) ಶಾಸಕ ಎಸ್.ಟಿ. ಸೋಮಶೇಖರ್ ಅವರ ಫೋಟೋ ಇರುವ ಪುಸ್ತಕಗಳನ್ನು ಹಿಡಿದುಕೊಂಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

‘ಮತದಾರರ ಹುಂಡಿಯೇ ಲೂಟಿ’ ಎಂದ ಹೆಚ್‌ಡಿಕೆ

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ, ಸಂವಿಧಾನವನ್ನು ಬುಡಮೇಲು ಮಾಡುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಅಧಿಕಾರಿಗಳು ಸರ್ಕಾರದ ಗುಲಾಮರಾಗಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಕೆಪಿಸಿಸಿ ಹೊಸ ಅಧ್ಯಕ್ಷರು ರಾಮಮಂದಿರದ ಬಗ್ಗೆ ಮಾತನಾಡುತ್ತಾರೆ, ಆದರೆ ಇಲ್ಲಿ ನೋಡಿದರೆ ಇಡೀ ಮತದಾರರ ಹುಂಡಿಯನ್ನೇ ಲೂಟಿ ಮಾಡಲು ಸರ್ಕಾರ ಹೊರಟಿದೆ. ಈ ಮೂಲಕ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗುತ್ತಿದೆ."‌ - ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ರಾಜ್ಯದ ಹಲವು ಭಾಗಗಳಿಂದ ತಮಗೆ ಇಂತಹ ಅಕ್ರಮಗಳ ಕುರಿತು ಕರೆಗಳು ಬರುತ್ತಿವೆ ಎಂದು ತಿಳಿಸಿದ ಅವರು, ಈ ಕುರಿತು ದೂರು ನೀಡಲು ಕೇಂದ್ರ ಚುನಾವಣಾ ಆಯುಕ್ತರ ಭೇಟಿಗೆ ಸಮಯ ಕೇಳಿರುವುದಾಗಿ ಹಾಗೂ ಇಂದು ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡುವುದಾಗಿ ಸ್ಪಷ್ಟಪಡಿಸಿದರು.

ಸಿಇಒ ಅನ್ಬುಕುಮಾರ್ ವಿರುದ್ಧ ಅಸಮಾಧಾನ

ಭಾರತೀಯ ಚುನಾವಣಾ ಆಯೋಗದ (ECI) ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್ ಹೊರಡಿಸಿರುವ ಖಡಕ್ ಆದೇಶದ ಬಗ್ಗೆಯೂ ಹೆಚ್‌ಡಿಕೆ ವ್ಯಂಗ್ಯವಾಡಿದರು.

ಕಚೇರಿಯಲ್ಲಿ ಕುಳಿತರೆ ಸಾಕೆ?: "ಅನ್ಬುಕುಮಾರ್ ಅವರು ಕಚೇರಿಯಲ್ಲಿ ಕುಳಿತು ಆದೇಶಿಸಿದರೆ ಸಾಕಾ?  ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಾವು ಈಗಾಗಲೇ ನೀಡಿರುವ ದೂರಿನ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ? ಬೆಳಗ್ಗೆಯಿಂದ ಆಯುಕ್ತರು ಕಚೇರಿಗೇ ಬಂದಿಲ್ಲ" ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

ಒಟ್ಟಾರೆಯಾಗಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತಾರತಮ್ಯ ಮತ್ತು ಆಡಳಿತ ಪಕ್ಷದ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಹೆಚ್.ಡಿ. ಕುಮಾರಸ್ವಾಮಿ ಅವರ ಸರಣಿ ವಿಡಿಯೋ ಬಾಂಬ್‌ಗಳು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿವೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular