ಬೆಂಗಳೂರು: ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಗೃಹಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. “ರಾಹುಲ್ ಗಾಂಧಿ ಮೊದಲಿನಿಂದಲೂ ಅಕ್ರಮದ ಬಗ್ಗೆ ಎತ್ತಿ ಹೇಳ್ತಿದ್ದಾರೆ. ಆದರೆ ಚುನಾವಣಾ ಆಯೋಗ ಅದನ್ನು ನಿರ್ಲಕ್ಷಿಸುತ್ತಿತ್ತು. ಈಗಾಗಲೇ ಸಾಕಷ್ಟು ಮಾಹಿತಿ ಬಹಿರಂಗವಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಆಯೋಗ ಕ್ರಮಕೈಗೊಳ್ಳಬೇಕು,” ಎಂದು ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಅದಷ್ಟೇ ಅಲ್ಲದೆ, ರಾಜ್ಯದ ಮತದಾರರ ಪಟ್ಟಿ (ವೋಟರ್ ಲಿಸ್ಟ್) ಕುರಿತು ಕೂಡಾ ಏರುಪೇರಾಗಿರುವ ಬಗ್ಗೆ ಈಗಾಗಲೇ ನಾವು ಸೂಚಿಸಿದ್ದೇವೆ ಎಂದೂ ಪರಮೇಶ್ವರ್ ಹೇಳಿದರು.
ಇದಕ್ಕೂ ಮೀರಿದಂತೆ, ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಯಿಂದ ಐಪಿಎಸ್ ಅಧಿಕಾರಿ ಸೌಮ್ಯಲತಾ ಹೊರಗುಳಿಯುವ ವಿಚಾರಕ್ಕೆ ಸ್ಪಂದಿಸಿದ ಅವರು, “ಅಧಿಕೃತ ಮಾಹಿತಿ ನನಗೆ ಬಂದಿಲ್ಲ. ಆದರೆ ಅನೌಪಚಾರಿಕವಾಗಿ ಅವರು ವೈಯಕ್ತಿಕ ಕಾರಣದಿಂದ ತಂಡದಿಂದ ಹೊರ ಬರುವುದಾಗಿ ಪತ್ರ ಬರೆದಿದ್ದಾರೆ” ಎಂದು ವಿವರಿಸಿದರು.
ಜಾತಿ ಜನಗಣತಿ ಕುರಿತು, “ಇಂದಿನ ತಂತ್ರಜ್ಞಾನ ಬಳಸಿ 16 ದಿನಗಳೊಳಗೆ ಸಮೀಕ್ಷೆ ನಡೆಸುವುದು ಸಾಧ್ಯ. ಕೇಂದ್ರ ಮತ್ತು ರಾಜ್ಯದ ನಡುವೆ ಈ ವಿಷಯದಲ್ಲಿ ಯಾವುದೇ ಸಂಘರ್ಷವಿಲ್ಲ. ಸಮೀಕ್ಷೆ purely ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಹಿನ್ನಲೆಗಾಗಿ ಮಾಡಲಾಗುತ್ತಿದೆ,” ಎಂದು ಅವರು ಸ್ಪಷ್ಟಪಡಿಸಿದರು.
ಆಂಧ್ರಪ್ರದೇಶದಲ್ಲಿ ಎರಡು ಬಿಜೆಪಿ ಕಾರ್ಯಕರ್ತರ ಹತ್ಯೆ ಕುರಿತಂತೆ, “ಅವರು ಆ ರಾಜ್ಯದವರು. ಆಂಧ್ರ ಪೊಲೀಸರು ತನಿಖೆ ಮಾಡ್ತಾರೆ. ನಮ್ಮ ಪೊಲೀಸರು ಸಹಕರಿಸುತ್ತಾರೆ,” ಎಂದು ಪರಮೇಶ್ವರ್ ಹೇಳಿದರು.
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ವರದಿ ಕುರಿತು, “ಜಸ್ಟ್. ಕುನ್ಹಾ ವರದಿಯನ್ನು ಸಂಪುಟದಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಕೊಹ್ಲಿ ಹೆಸರು ವರದಿಯಲ್ಲಿ ಇಲ್ಲ,” ಎಂದು ಸ್ಪಷ್ಟಪಡಿಸಿದರು.