ಬೆಳಗಾವಿ : ವಿಧಾನಪರಿಷತ್‌ನಲ್ಲಿ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ 50 ಸಾವಿರ ಕೋಟಿ ಅನುದಾನ ದುರುಪಯೋಗವಾಗಿದೆ ಎಂದು ಆಡಳಿತ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಸದಸ್ಯರು ಈ ಪ್ರಕರಣವನ್ನು ಎಸ್‌ಐಟಿ ರಚನೆ ಮಾಡಿ ತನಿಖೆಗೆ ಆದೇಶ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಭಾರೀ ಮಾತಿನ ಚಕಮಕಿ ನಡೆದು ಸದನದಲ್ಲಿ ಒಂದು ಕ್ಷಣ ಕಾವೇರಿದ ವಾಕ್ಸಮರವೇ ನಡೆದಿದ್ದು, ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಎನ್.ಹೆಚ್.ಜಕ್ಕಪ್ಪನವರ್, ಗ್ರಾಮ ಪಂಚಾಯಿತಿಗಳಲ್ಲಿ ಎಸ್‌ಸಿ, ಎಸ್‌ಟಿ ವರ್ಗಗಳಿಗೆ ಮೀಸಲಿಟ್ಟ ಅನುದಾನದ ಮೊತ್ತ ಗ್ರಾಮಸಭೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಪ್ರಶ್ನೆ ಮಾಡಿದ್ದಾರೆ.
ಸಚಿವರ ಪರವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಉತ್ತರಿಸುವ ಮೊದಲೇ ಸುದೀರ್ಘವಾಗಿ ಮಾತನಾಡಿದ ಜಕ್ಕಪ್ಪನವರ್, ಗ್ರಾಮ ಪಂಚಾಯಿತಿಗಳಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ. ಗ್ರಾಮಸಭೆಗಳನ್ನು ಸಹ ಕರೆದಿಲ್ಲ. ಈ ಸಮುದಾಯದ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ಏಕೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಅಲ್ಲದೇ ಎಸ್‌ಸಿ/ಎಸ್‌ಟಿ ಸಮುದಾಯ ಸಂವಿಧಾನಬದ್ಧವಾದ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಇತರರಂತೆ ಮುಂದೆ ಬರಬೇಕೆಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಾಗಿತ್ತು. ಸರ್ಕಾರ ಅನುದಾನವನ್ನು ಮೀಸಲಿಟ್ಟಿದ್ದರೂ ಏಕೆ ಸದ್ಬಳಕೆಯಾಗುತ್ತಿಲ್ಲ? ಗ್ರಾಮ ಪಂಚಾಯಿತಿ ಸಭೆ ಕರೆಯಲು ಇರುವ ಸಮಸ್ಯೆಯಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ಇನ್ನೂ ನನಗಿರುವ ಮಾಹಿತಿ ಪ್ರಕಾರ, ಈ ಎರಡೂ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಅನುದಾನದಲ್ಲೇ ಗೋಲ್‌ಮಾಲ್ ಆಗಿದೆ. ಅಂದಾಜು 50 ಸಾವಿರ ಕೋಟಿ ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಿದ ಅವರು, ಸದಸ್ಯರು ಈ ಆರೋಪ ಮಾಡುತ್ತಿದ್ದಂತೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸದಸ್ಯರಾದ ರವಿಕುಮಾರ್, ಪೂಜಾರ್, ಹೇಮಲತಾ ನಾಯಕ್ ಮತ್ತಿತರರು ಇದು ಗಂಭೀರವಾದ ಆರೋಪ. ಸರ್ಕಾರದ ಮೇಲೆಯೇ ಸದಸ್ಯರೊಬ್ಬರು ಇಷ್ಟು ದೊಡ್ಡ ಮೊತ್ತದ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ತಕ್ಷಣವೇ ಇದನ್ನು ತನಿಖೆಗೆ ವಹಿಸಿ ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ಸದಸ್ಯರ ಪರವಾಗಿ ಎದ್ದು ನಿಂತ ಸದಸ್ಯ ಶಿವಕುಮಾರ್, ಸದಸ್ಯರು ಈ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡಿಲ್ಲ. ಕಳೆದ 10 ವರ್ಷಗಳ ಅವಧಿಯಲ್ಲಿ ಆಗಿದೆ ಎಂದು ಹೇಳಿದ್ದಾರೆ. 201
5 ರಿಂದಲೂ ಇದು ನಡೆದಿದೆ ಎಂಬುದು ಅವರ ಆರೋಪ ಎಂದು ಸಮರ್ಥನೆ ಮಾಡಿಕೊಂಡರು.
ನಂತರ ಪ್ರತಿಪಕ್ಷದ ಸದಸ್ಯರು ಎಸ್‌ಐಟಿ ತನಿಖೆಯಾಗಲೇಬೇಕು, ಇಷ್ಟು ದೊಡ್ಡ ಮಟ್ಟದ ಹಗರಣ ನಡೆಸಿದವರ ಮೇಲೆ ತನಿಖೆಯಾಗಲೇಬೇಕು. ತನಿಖೆಗೆ ಸಭಾಪತಿಯವರು ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದು, ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮತ್ತೆ ಮಾತಿನ ಚಕಮಕಿ ನಡೆದು, ವಿಷಯ ಪ್ರಸ್ತಾಪಿಸಲು ಪುನಃ ಛಲವಾದಿ ನಾರಾಯಣಸ್ವಾಮಿ ಮುಂದಾದಾಗ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್ ಅವರು ಪ್ರಶ್ನೋತ್ತರ ಅವಧಿಯಲ್ಲಿ ಚರ್ಚೆಗೆ ಅವಕಾಶವಿದೆಯೇ? ಇದ್ದರೆ ಯಾವ ನಿಯಮದಡಿ ಕೊಡುತ್ತೀರಿ? ಈ ರೀತಿ ಸದಸ್ಯರು ಸದನದಲ್ಲಿ ವರ್ತಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ. ಬಳಿಕ ಸಭಾಪತಿಯವರು ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎನ್ನಲಾಗಿದೆ.



