ಬೆಂಗಳೂರು: ರಾಜ್ಯದ ಹಣ ಪಂಚರಾಜ್ಯಗಳ ಚುನಾವಣೆಗೆ ಬಳಕೆ ಮಾಡುತ್ತಾರೆ ಎಂಬ ಮಾಜಿ ಸಚಿವ ಮುನಿರತ್ನ ಅವರ ಆರೋಪ ಸುಳ್ಳು, ಅದನ್ನು ಅವರು ನೋಡಿದ್ದಾರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುನಿರತ್ನ ಅವರು ಮಾಡಿರುವ ಈ ಆರೋಪದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನೀನು ನೋಡಿದ್ದೀಯಾ? ಅವರು ನೋಡಿದ್ದಾರಾ?. ಆರೋಪ ಮಾಡೋಕೆ ಏನು?. ಎಲ್ಲಾ ಆರೋಪಗಳು ಸುಳ್ಳುಗಳಿಂದ ಕೂಡಿವೆ. ಬಿಜೆಪಿ ಶಾಸಕರ ಆರೋಪಗಳು ನಿಜವಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮಳೆ ಕಡಿಮೆಯಾಗಿದ್ದು ಮಾತ್ರವಲ್ಲದೆ ರಾಜ್ಯದಲ್ಲಿ ಹಾಗೂ ಬೇಸಿಗೆ ರೀತಿಯ ವಾತಾವರಣ ಇದೆ. ಇದರಿಂದಾಗಿ ವಿದ್ಯುತ್ತಿಗೆ ಬೇಡಿಕೆ ಹೆಚ್ಚಾಗಿದೆ. ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿದ್ದು, ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ವರ್ಷ ಇದೇ ವೇಳೆಗೆ ೯೦೦ ಮೆಗಾ ವ್ಯಾಟ್ ವಿದ್ಯುತ್ ಬಳಸಲಾಗುತ್ತಿತ್ತು. ಈ ಬಾರಿ ೧೫೦೦ ರಿಂದ ೧೬೦೦ ಮೆಗಾ ವ್ಯಾಟ್ ವಿದ್ಯುತ್‌ಗೆ ಬೇಡಿಕೆ ಇರುವುದರಿಂದ ತೊಂದರೆಯಾಗಿದೆ. ವಿದ್ಯುತ್ ಅನ್ನು ಹೊರಗಿನಿಂದ ಹೇಗೆ ಖರೀದಿಸುವುದು ಎಂಬ ಚರ್ಚಿಸಲು ಇಂದು ಮಧ್ಯಾಹ್ನ ಸಭೆ ಕರೆಯಲಾಗಿದೆ. ವಿದ್ಯುತ್ ಉತ್ಪಾದನೆ ಮಾಡುವವರು ಸರ್ಕಾರಕ್ಕೆ ಮಾರಾಟ ಮಾಡಬೇಕು, ಬೇರೆ ಎಲ್ಲಿಯೂ ಮಾರಬಾರರು ಎಂದು ನಿನ್ನೆ ಅದೇಶವನ್ನೂ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.
ಮಳೆ ಇಲ್ಲದೇ ಬರಗಾಲ ಬಂದು ತೊಂದರೆಯಾಗಿದೆ. ಆದರೂ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಅವರು ಹೇಳಿದಂತೆ ಸಂಪೂರ್ಣ ಲೋಡ್ ಶೆಡ್ಡಿಂಗ್ ಆಗಿಲ್ಲ. ಮೂರು ಫೇಸ್‌ನಲ್ಲಿ ೭ ಗಂಟೆ ವಿದ್ಯುತ್ ನೀಡಬೇಕೆಂದಿರುವುದನ್ನು ಕೊಡಲು ಆಗುತ್ತಿಲ್ಲ ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.