ಬೆಂಗಳೂರು: ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಕೇರಳ ಮೂಲದ ಇಬ್ಬರು ಪದವೀಧರರನ್ನು ಬಂಧಿಸಿ 13 ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಇಬ್ಬರು ವ್ಯಕ್ತಿಗಳು ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ. ತಕ್ಷಣ ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿ ಮತ್ತು ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡು ಸ್ಥಳದ ಮೇಲೆ ದಾಳಿ ಮಾಡಿ ಇಬ್ಬರು ಬಿಬಿಎ ಪದವೀಧರರನ್ನು ಬಂಧಿಸಿದ್ದಾರೆ.
ಈ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ, ಮೋಜಿನ ಜೀವನ ಮತ್ತು ಅಕ್ರಮ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೇರಳದ ಅಪರಿಚಿತ ವ್ಯಕ್ತಿಗಳಿಂದ ಗಾಂಜಾ ಮತ್ತು ಹೈಡ್ರೋ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ ನಗರಕ್ಕೆ ತಂದು ಹೆಚ್ಚಿನ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದುದಾಗಿ ಹೇಳಿದ್ದಾರೆ.
ಆರೋಪಿಗಳಿಂದ 1 ಕೆಜಿ 200 ಗ್ರಾಂ ಗಾಂಜಾ, 220 ಗ್ರಾಂ ಹೈಡ್ರೋ ಗಾಂಜಾ, 1 ತೂಕದ ಯಂತ್ರ, 2 ಐಫೋನ್ ಗಳನ್ನು ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ 13 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.