ಹನೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಒಬ್ಬಂಟಿಯಾಗಿ ಸ್ಪರ್ಧಿಸಿದರೆ ಹೆಚ್ಚಿನ ಸೀಟು ಗೆಲ್ಲಲು ಸಾಧ್ಯವಿಲ್ಲ ಎಂದು ಮನಗಂಡು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಆರ್ ನರೇಂದ್ರ ವ್ಯಂಗ್ಯವಾಡಿದರು.
ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ರವರು ಜಾತ್ಯಾತೀತ ತತ್ವ ಅನುಸರಿಸಿಕೊಂಡು ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ವೈಯಕ್ತಿಕವಾಗಿ ಹೇಳುವುದಾದರೆ ದೇವೇಗೌಡರವರಿಗೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟವಿಲ್ಲ. ಆದರೆ ಪಕ್ಷ ಹೀನಾಯವಾಗಿ ಸೋತಿರುವುದರಿಂದ ಹಾಗೂ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಮೈತ್ರಿ ಮಾಡಿಕೊಂಡಿದ್ದಾರೆ. ಈಗಾಗಲೇ ಸ್ವಪಕ್ಷದ ಕಾರ್ಯಕರ್ತರು, ಶಾಸಕರು ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ ಪಕ್ಷದ ಕಾರ್ಯಕರ್ತರಿಗೆ ಶಾಸಕರಿಗೆ ಬೆಲೆ ನೀಡುತ್ತಾರೋ ಅಥವಾ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.
ಈಗಾಗಲೇ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದರೆ ಐದು ಯೋಜನೆಗಳನ್ನು ಜಾರಿಗೆ ತರುತ್ತವೆ ಎಂದು ಭರವಸೆ ನೀಡಿದ್ದೆವು, ಅದರಂತೆ ಶಕ್ತಿ ಯೋಜನೆ, ಗೃಹಲಕ್ಷ್ಮಿ ಅನ್ನಭಾಗ್ಯ ಗೃಹ ಜ್ಯೋತಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಯುವ ನಿಧಿಯನ್ನು ಸಹ ಮುಂದಿನ ದಿನಗಳಲ್ಲಿ ಜಾರಿಗೆ ತರಲಿದ್ದೇವೆ ಈ ಪಂಚ ಯೋಜನೆಗಳು ರಾಜ್ಯದಲ್ಲಿ ಯಶಸ್ವಿಯಾಗಿರುವುದರಿಂದ ಬಿಜೆಪಿಗೆ ನಡುಕ ಪ್ರಾರಂಭವಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಯಾರೇ ಮೈತ್ರಿ ಮಾಡಿಕೊಂಡರು ಸಹ ಕಾಂಗ್ರೆಸ್ ಪಕ್ಷದ ಬೇರು ಭದ್ರವಾಗಿ ನಿಂತಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ 20 ರಿಂದ 22 ಸೀಟ್ ಗಳನ್ನು ಗೆದ್ದೇ ಗೆಲ್ಲುತ್ತೇವೆ ಆದರೆ ಪಕ್ಷದ ವರಿಷ್ಠರು ಸ್ಥಳೀಯ ಶಾಸಕರು, ಮಾಜಿ ಶಾಸಕರ ಕಾರ್ಯಕರ್ತರು ಅಭಿಪ್ರಾಯ ಪಡೆದು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವೂ ಇಲ್ಲ ಅನಾನುಕೂಲವೂ ಇಲ್ಲ: ಬಿಜೆಪಿ, ಜೆಡಿಎಸ್ ಮೈತ್ರಿ ಆಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಮೇಲೆ ನಿಂತಿದೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರುಗಳ ಮೇಲೆ ಪಕ್ಷ ನಿಂತಿಲ್ಲ ಎಂದರು.
ಇನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಧ್ಯಮದ ಜೊತೆ ಮಾತನಾಡಿ, ದೇವೇಗೌಡ ಹಾಗೂ ಅಮಿತ್ ಶಾ ರವರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಈಗಾಗಲೇ ಚರ್ಚೆ ನಡೆಸಿದ್ದಾರೆ . ರಾಜ್ಯದಲ್ಲಿ 4 ಸ್ಥಾನಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಕುಮಾರಸ್ವಾಮಿ ರವರು ಇನ್ನು ಯಾವುದೇ ಚರ್ಚೆ ನಡೆಸಿಲ್ಲ ಸೀಟು ಹಂಚಿಕೆ ಬಗ್ಗೆಯೂ ಯಾವುದೇ ಪ್ರಸ್ತಾಪವಾಗಿಲ್ಲ ಎಂದು ತಿಳಿಸಿದ್ದಾರೆ ಒಟ್ಟಾರೆ ಇವರು ಮೈತ್ರಿ ಮಾಡಿಕೊಳ್ಳುವುದು ಸತ್ಯ ಎಂಬುದು ಈ ನಾಯಕರಗಳ ಹೇಳಿಕೆಯಿಂದ ತಿಳಿದು ಬಂದಿದೆ ಎಂದರು.